ಬೆಂಗಳೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಡೆ ಹಂತಕ್ಕೆ ಬಂದಿದ್ದೇವೆ. ಕೂಡಲೇ ಮೀಸಲಾತಿ ಘೋಷಣೆ ಮಾಡದೆ ಇದ್ದರೆ ಮಾಡು ಇಲ್ಲವೇ ಮಡಿ ಹೋರಾಟ ಮಾಡಬೇಕಾಗಲಿದೆ ಎಂದು ಸರ್ಕಾರಕ್ಕೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಎಚ್ಚರಿಕೆ ರವಾನಿಸಿದ್ದಾರೆ.
ಮಂಗಳವಾರ ಸಿಎಂ ಅಧಿಕೃತ ನಿವಾಸದಲ್ಲಿ ಲಿಂಗಾಯತ ಪಂಚಮ ಸಾಲಿಗೆ 2ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ನಂತರ ಮೀಸಲಾತಿ ಕುರಿತು ಸಿಎಂ ಜೊತೆ ಶ್ರೀಗಳ ನಿಯೋಗ ಚರ್ಚಿಸಿತು.
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಚನಾನಂದ ಶ್ರೀಗಳು, 2ಎ ಮೀಸಲಾತಿ ಕುರಿತು ನಾನು ಸಿಎಂಗೆ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನಾವು ಉಗ್ರ ಆಗಬಾರದಂದರೆ ಶೀಘ್ರವೇ ಮೀಸಲಾತಿ ಕೊಡಬೇಕು. ಮೀಸಲಾತಿಗಾಗಿ ನಾವು ಪ್ರಾಣ ಬಿಡುವುದಕ್ಕೂ ಸಿದ್ಧರಾಗಿದ್ದೇವೆ. ಯಾವ ಕಾರಣಕ್ಕೂ ನಾವು ಮೀಸಲಾತಿ ಬಿಡಲ್ಲ ಎಂದು ಗುಡುಗಿದರು.
ಮೀಸಲಾತಿ ವಿಚಾರದಲ್ಲಿ ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದಿಸಿದ್ದಾರೆ. ಇದುವರೆಗೆ ಕೂಡ ಸಮೀಕ್ಷೆ ಆಗಿರಲಿಲ್ಲ, ಹೀಗಾಗಿ ನಾವು ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈಗ ಎಲ್ಲಾ ಜಿಲ್ಲೆಯ ಸಮೀಕ್ಷೆ ಆಗಿದೆ. ವಿಧಾನಸಭೆ ಅಧಿವೇಶದ ಒಳಗಾಗಿ ವರದಿಯನ್ನು ತೆಗೆದುಕೊಂಡು ಮೀಸಲಾತಿ ನೀಡಬೇಕು ಎಂದು ಸಿಎಂಗೆ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದರು.
ಭೇಟಿ ವೇಳೆ ಸಿಎಂ ಶೀಘ್ರವೇ ವರದಿ ತೀರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ವರದಿ ನಮಗೂ ಆಧಾರ, ಸರ್ಕಾರಕ್ಕೂ ಆಧಾರ. ವರದಿ ಇಲ್ಲ ಅಂದರೆ ಅನೇಕ ತೊಂದರೆಗಳು ಆಗುತ್ತವೆ. ನಮ್ಮ ಸಮುದಾಯದ ನಾಯಕರು ಅವರ ಕ್ಷೇತ್ರದಲ್ಲಿ ಮೂರು ಬಾರಿ ಬೊಮ್ಮಾಯಿ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಅವರಿಗೆ ಕೂಡ ಸಮಾಜದ ಬಗ್ಗೆ ಅರಿವಿದೆ. ಹೀಗಾಗಿ ಆದಷ್ಟು ಬೇಗ ಪಂಚಮಸಾಲಿಗೆ ಮೀಸಲಾತಿ ನೀಡಲಿದ್ದಾರೆ. ಒಂದು ವೇಳೆ ಮೀಸಲಾತಿ ಕೊಡಲಿಲ್ಲ ಅಂದರೆ ಮತ್ತೆ ಮಾಧ್ಯಮಗೋಷ್ಟಿ ಮಾಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ:2ಎ ಮೀಸಲಾತಿ ಡೆಡ್‌ಲೈನ್ ತಪ್ಪಿದರೆ ಸುವರ್ಣಸೌಧಕ್ಕೆ ಮುತ್ತಿಗೆ: ಜಯಮೃತ್ಯುಂಜಯ ಶ್ರೀ