ಕರ್ನಾಟಕ

karnataka

ETV Bharat / state

2ನೇ ಪಟ್ಟಿಯಲ್ಲೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಲಿಂಗಾಯತ ಕೈ​ ನಾಯಕರ ಒತ್ತಾಯ

ವೀರಶೈವ ಲಿಂಗಾಯತ ಸಮುದಾಯದ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ.

By

Published : Apr 4, 2023, 3:08 PM IST

CNG
ಕಾಂಗ್ರೆಸ್ ಪಕ್ಷ

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತಮಗೆ ಹೆಚ್ಚು ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿರುವ ಲಿಂಗಾಯತ ಸಮುದಾಯದ ನಾಯಕರು ಸೋಮವಾರ(ನಿನ್ನೆ) ಮತ್ತೆ ಪಕ್ಷದ ಮೇಲೆ ಒತ್ತಡ ಹೇರಿದ್ದಾರೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಪೈಕಿ 32 ಮಂದಿ ವೀರಶೈವ ಲಿಂಗಾಯತರಿಗೆ ಟಿಕೆಟ್ ಘೋಷಿಸಲಾಗಿತ್ತು. ಇದೀಗ ಎರಡನೇ ಪಟ್ಟಿಯಲ್ಲೂ ಅಷ್ಟೇ ಸಂಖ್ಯೆಯಲ್ಲಿ ಟಿಕೆಟ್ ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ.

ವೀರಶೈವ, ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡುವಂತೆ ಒತ್ತಾಯಿಸಲು ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ, ಹೈಕಮಾಂಡ್ ಮಟ್ಟದಲ್ಲಿಯೂ ಲಾಬಿ ನಡೆಸಲು ಸಹ ತೀರ್ಮಾನಿಸಲಾಗಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಈಶ್ವರ ಖಂಡ್ರೆ ಪಕ್ಷದಲ್ಲಿರುವ ಸಮುದಾಯದ ನಾಯಕರ ಪರ ಅಭಿಪ್ರಾಯ ತಿಳಿಸಿದ್ದಾರೆ. ಈಶ್ವರ ಖಂಡ್ರೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಗೆಲ್ಲುವ ವಾತಾವರಣ ಹಾಗೂ ಸಮುದಾಯದವರು ಹೆಚ್ಚಿರುವ ಕಡೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಆದ್ಯತೆಯ ಮೇರೆಗೆ ಸಮುದಾಯದ ಮತದಾರರನ್ನು ಸೆಳೆಯಬಹುದು. ಮೊದಲ ಪಟ್ಟಿಯಲ್ಲಿ 32 ಮಂದಿಗೆ ಕಾಲಾವಕಾಶ ಕಲ್ಪಿಸಲಾಗಿದೆ. ಮೊದಲ ಪಟ್ಟಿ ಬಿಡುಗಡೆಗೂ ಮುನ್ನ ಸಭೆ ಸೇರಿ ಚರ್ಚಿಸಿ ಪಕ್ಷದ ನಾಯಕರ ಮೇಲೆ ಒತ್ತಡ ತರಲಾಗಿತ್ತು. ಇದೀಗ ಖಂಡ್ರೆ ಅವರು ನಾಯಕರನ್ನು ಭೇಟಿ ಮಾಡಿ ಅಭಿಪ್ರಾಯ ಹೇಳಿದ್ದಾರೆ. ಇನ್ನೂ 100 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕಿದೆ. ಅದರಲ್ಲಿಯೂ ತಮಗೆ ಸಿಂಹಪಾಲು ನೀಡಬೇಕು ಎಂಬುದು ವೀರಶೈವ ಲಿಂಗಾಯತ ಸಮುದಾಯದ ನಾಯಕರ ಆಗ್ರಹ.

ಮೊದಲ ಪಟ್ಟಿ ಬಿಡುಗಡೆಗೆ ಮುನ್ನ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವ ಸಮಿತಿ ಸಭಾಂಗಣದಲ್ಲಿ ಸಮುದಾಯದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವಿನಯ್ ಕುಲಕರ್ಣಿ, ಲಕ್ಷ್ಮೀ ಹೆಬ್ಬಾಳ್ಕರ್, ಅಶೋಕ್ ಪಟ್ಟಣ ಶೆಟ್ಟಿ ಸೇರಿದಂತೆ ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದರು. ಕಳೆದ ಸಾರಿ 48 ಸ್ಥಾನದಿಂದ ಟಿಕೆಟ್ ಪಡೆದಿದ್ದ ಕಾಂಗ್ರೆಸ್ ನಾಯಕರು ಈ ಸಲ 65 ಸ್ಥಾನಗಳಿಗೆ ಬೇಡಿಕೆ ಇಡಲು ತೀರ್ಮಾನಿಸಿತ್ತು.

ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಅವಕಾಶವಿದೆ. ರಾಜ್ಯದ ದೊಡ್ಡ ಮತದಾರ ಸಮುದಾಯವಾದ ಲಿಂಗಾಯತರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್‌ನತ್ತ ಸೆಳೆಯಬೇಕಾದರೆ ಹೆಚ್ಚಿನವರಿಗೆ ಛಾನ್ಸ್‌ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುತ್ತಾರೆ. ಅದರಲ್ಲಿ ಸಂಶಯವೇ ಬೇಡ. ಮತದಾರರಲ್ಲಿ ಬಿಜೆಪಿ ಬಗ್ಗೆ ಅಷ್ಟು ಒಲವು ಇಲ್ಲ ಎನ್ನುವುದನ್ನು ಪಕ್ಷದ ಹೈಕಮಾಂಡ್​ಗೆ ವಿವರಿಸಲು ನಾಯಕರು ನಿರ್ಧರಿಸಿದ್ದಾರೆ.

ವೀರಶೈವ, ಲಿಂಗಾಯತ ಸಮುದಾಯದ 210 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು ಅದರಲ್ಲಿ ಸುಮಾರು 73 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿರುವ ವಿಚಾರ ಕಂಡುಬಂದಿದೆ. ಅದರಲ್ಲಿ ಗೆಲ್ಲುವ ಪ್ರಬಲ ಸಾಧ್ಯತೆ ಇರುವ ಆಕಾಂಕ್ಷಿಗಳಿಗೆ ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನೂ ಸೇರಿಸಿ ಕಾಂಗ್ರೆಸ್ಸಿಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ತೀರ್ಮಾನಿಸಲಾಗಿತ್ತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲಿಂಗಾಯತ, ವೀರಶೈವದ ಎಲ್ಲಾ ಪಂಗಡಗಳನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಇದನ್ನೂ ಓದಿ:ಇಂದು ದಿಲ್ಲಿಯಲ್ಲಿ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ: ರಾಜ್ಯ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ?

ABOUT THE AUTHOR

...view details