ಮಗನ ಸಾವಿಗೆ ಕೆಇಬಿಯೇ ಕಾರಣ - ಲೈನ್ಮ್ಯಾನ್ ತಂದೆ ಹೇಳಿಕೆ ಬೆಂಗಳೂರು:ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ದುರಸ್ತಿ ಕಾರ್ಯದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ನಡೆದಿದೆ. ಗೌತಮ್ (32) ಮೃತ ದುರ್ದೈವಿ.
ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಎಂದು ಬೆಳಗ್ಗೆ 9 ಗಂಟೆಗೆ ತೆರಳಿದ್ದ ಗೌತಮ್, ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗನ ಸಾವಿಗೆ ಕೆಇಬಿಯೇ ನೇರ ಹೊಣೆ ಎಂದು ಮೃತನ ತಂದೆ ರಂಗಸ್ವಾಮಿ ದೂರಿದ್ದಾರೆ.
ಆಸ್ಪತ್ರೆ ಬಳಿ ಮಾತನಾಡಿದ ಮೃತ ಗೌತಮ್ ತಂದೆ ರಂಗಸ್ವಾಮಿ, 'ನನ್ನ ಮಗನ ಸಾವಿಗೆ ಕೆಇಬಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ಗಳೇ ಕಾರಣ ಮತ್ತು ಆತನನ್ನು ಕೊಲೆ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ. 'ಭ್ರಷ್ಟಾಚಾರದ ಕೂಪವಾಗಿರುವ ಕೆಇಬಿ ಇಲಾಖೆ, ನನ್ನ ಮಗನ ಸಾವಿನ ನಂತರವೂ ವಿಚಾರಿಸಲು ಬಂದಿಲ್ಲ. ಅಕ್ಕಪಕ್ಕದಲ್ಲಿದ್ದ ಎರಡು ಲೈನ್ಗಳಲ್ಲಿ ಒಂದು ಲೈನ್ ಆಫ್ ಆಗಿತ್ತು. ಮತ್ತೊಂದು ಲೈನ್ ನಲ್ಲಿ ವಿದ್ಯುತ್ ಪ್ರವಹಿಸಿರುವುದರಿಂದ ಅವಘಡ ಸಂಭವಿಸಿದೆ. ಅದು ಗೊತ್ತಿದ್ದ ಮೇಲೂ ಕಂಬ ಹತ್ತಿಸಿರುವುದು ತಪ್ಪಲ್ಲವೇ? ಇದು ಉದ್ದೇಶಪೂರ್ವಕವಾಗಿಯೇ ಹತ್ಯೆ ಅಲ್ಲದೇ ಮತ್ತೇನೂ ಅಲ್ಲ ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಈ ಸಂಬಂಧ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್, ಹಾಗೂ ಜೊತೆಗಿದ್ದ ಚಾಲಕನ ವಿರುದ್ಧ ರಂಗಸ್ವಾಮಿ ನೀಡಿರುವ ದೂರಿನನ್ವಯ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಆಸ್ಪತ್ರೆ ಬಳಿ ಮೃತನ ಸ್ನೇಹಿತರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಸರಣಿ ಅಪಘಾತದಿಂದ ಸಂಚಾರ ದಟ್ಟಣೆ:ಇದು ಲೈನ್ಮ್ಯಾನ್ ಸಾವಿನ ಸುದ್ದಿಯಾದರೆ, ಇನ್ನೊಂದೆಡೆಕಾರು ಚಾಲಕನೊಬ್ಬನ ಯಡವಟ್ಟಿನಿಂದ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಮೂರ್ನಾಲ್ಕು ಕಾರುಗಳು ಒಂದಕ್ಕೊಂದು ಹಿಂಬದಿಯಿಂದ ಡಿಕ್ಕಿಯಾಗಿದ್ದು, ಅಪಘಾತದಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ಬರುತ್ತಿದ್ದ ಮೂರ್ನಾಲ್ಕು ಕಾರುಗಳು ಢಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿಪತ್ನಿ ಕೊಂದಿದ್ದ ಪಾಪಿ ಪತಿ:ಈ ಹಿಂದೆಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನೇ ಕೊಲೆ ಮಾಡಿದ ಪತಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕೋಳಿವಾಡ ಗ್ರಾಮದಲ್ಲಿ ಪತ್ನಿ ಶಾರದಾ ದೇವರಮನಿ ಎಂಬವರನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿ ಉಡಚಪ್ಪ ದೇವರ ಮನಿಯನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ಹಾಗೂ ತಂಡ ಯಶಸ್ವಿಯಾಗಿದೆ.
ಇದನ್ನೂ ಓದಿ:200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ಲಕ್ಷ್ಮಣ್ ಇನ್ನಿಲ್ಲ