ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು, 'ತುಳು ಸಮುದಾಯದ ಮುಖಂಡರೊಬ್ಬರು ಕರೆ ಮಾಡಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿದರು.
ಮುಸ್ಲಿಂ ಮತ್ತು ಬಿಲ್ಲವ ಸಮಾಜದ ಐಕ್ಯತಾ ಸಮಾವೇಶಕ್ಕೆ ನನಗೆ ಆಹ್ವಾನ ನೀಡಲಾಗಿತ್ತು. ಓರ್ವ ಪುಣೆಯಿಂದ ನನಗೆ ಕರೆಮಾಡಿ ತುಳು ಭಾಷೆಯಲ್ಲಿ 'ನಿನಗೆ ಗುಂಡು ಹಾರಿಸುತ್ತೇನೆ' ಎಂದು ಜೀವ ಬೆದರಿಕೆ ಹಾಕಿದ್ದಾನೆ. ನಾನು ಈ ಬಗ್ಗೆ ಇನ್ನು ಪೊಲೀಸ್ ಠಾಣೆಯ ಮೆಟ್ಟಿಲು ಸಹ ಏರಿಲ್ಲ. ಪೇಜಾವರ ಶ್ರೀಗಳು ಹಿಂದೂ- ಮುಸ್ಲಿಂ ಭಾಯಿ ಭಾಯಿ ಅಂದಾಗ ಯಾರು ಈ ಬಗ್ಗೆ ಮಾತನಾಡುವುದಿಲ್ಲ. ಅದೇ ಸಾಮಾನ್ಯರು ಮುಸ್ಲಿಂ ಹಾಗೂ ಬಿಲ್ಲವರು ಹೊಂದಾಣಿಕೆ ಮಾಡಿಕೊಂಡರೆ ಅವರಿಗೆ ಸಹಿಸಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಕಾರ್ಯಕಗ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಇದುವರೆಗೂ ನಾನು ಸಾರ್ವಜನಿಕವಾಗಿ ಸಿಎಎ, ಎನ್ಆರ್ಸಿ ಹಾಗೂ ಎನ್ಆರ್ಪಿ ಬಗ್ಗೆ ಏನೂ ಮಾತನಾಡಿಲ್ಲ. ನನಗೆ ಆ ಬಗ್ಗೆ ಅವಸರವೂ ಇಲ್ಲ. ನನ್ನ ಪ್ರಕಾರ ಸಿಎಎ ಹಾಗೂ ಎನ್ಆರ್ಸಿ ಅನುಷ್ಠಾನಕ್ಕೆ ಇನ್ನು 40 ವರ್ಷಗಳು ಕಳೆದರೂ ಆಗುವುದಿಲ್ಲ. ಒಂದುಕಾಲು ಕೋಟಿ ಅಧಿಕಾರಿಗಳು ಇದ್ದಾಗ ಮಾತ್ರ ಸಿಎಎ ಅಂಕಿಅಂಶಗಳು ಸಂಗ್ರಹಿಸಲು ಸಾಧ್ಯ. ಅಸ್ಸೊಂನಲ್ಲಿ ಸಾವಿರಕ್ಕೂ ಅಧಿಕ ಕೋಟಿ ವೆಚ್ಚವಾದರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಇಡೀ ದೇಶಾದ್ಯಂತ ಅನುಷ್ಠಾನ ತರಲು ಸಾಧ್ಯವಿಲ್ಲ ಎಂದರು.
ಸಮಾವೇಶ ಹಾಗೂ ಪ್ರತಿಭಟನೆಗಳು ನಡೆಯುತ್ತಿದರೂ ಹಳ್ಳಿಗಳಲ್ಲಿ ಈ ಬಗ್ಗೆ ಇನ್ನೂ ಅರಿವು ಬಂದಿಲ್ಲ. ಹಳ್ಳಿಗಳಿಗೆ ಹೋಗಿ ದಾಖಲೆ ಕೇಳಿದಾಗ ಬೆಂಕಿ ಬೀಳುತ್ತದೆ. ನಮ್ಮ ಎದುರಿಗಿರುವ ಬಹುದೊಡ್ಡ ಸವಾಲು ಹಿಂದೂ ಮತ್ತು ಮುಸ್ಲಿಮರ ಐಕ್ಯತೆ. ಇದನ್ನು ಒಡೆಯುವುದೆ ಅವರ ಮುಖ್ಯ ಉದ್ದೇಶವಾಗಿದೆ ಎಂದರು.