ಬೆಂಗಳೂರು:ಆಟೋ ರಿಕ್ಷಾಗಳು ಸಿಲಿಕಾನ್ ಸಿಟಿಯ ಜೀವನಾಡಿ. ಒಂದೆಡೆಯಿಂದ ಇನ್ನೊಂದೆಡೆ ಸಂಚರಿಸಲು ಸಾರಿಗೆ ಬಸ್ಗಳನ್ನು ಬಿಟ್ಟರೆ ನಗರದ ಜನ ಹೆಚ್ಚಾಗಿ ಆಟೋಗಳನ್ನೇ ಆಶ್ರಯಿಸುತ್ತಾರೆ. ಇಂತಹ ಆಟೋ ಚಾಲಕರ ಬದುಕು ಕೊರೊನಾ ಆವರಿಸಿಕೊಂಡ ಬಳಿಕ ಮೂರಾಬಟ್ಟೆಯಾಗಿದೆ.
ಲಾಕ್‌ಡೌನ್ ಸಡಿಲಿಕೆಯಾಗಿ ನಗರ ಸಹಜ ಸ್ಥಿತಿಗೆ ಮರಳಿದರೂ ಆಟೋ ಚಾಲಕರಿಗೆ ಮಾತ್ರ ಗ್ರಾಹಕರು ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಜನರ ಮನಸ್ಸಿನಲ್ಲಿರುವ ಕೊರೊನಾ ಭೀತಿ. ಆಟೋ ಹತ್ತಿದರೆ ಎಲ್ಲಿ ನಮಗೆ ಕೊರೊನಾ ತಗುಲುತ್ತೋ? ಎಂಬ ಭಯದಿಂದ ಜನ ಆಟೋಗಳಲ್ಲಿ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಗ್ರಾಹಕರನ್ನೇ ನಂಬಿದ್ದ ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ನಡುವೆ ಫೈನಾನ್ಶಿಯರ್ಗಳ ಕಿರುಕುಳ ಆಟೋ ಚಾಲಕರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ಬಳಲಿ ಬೆಂಡಾಗಿರುವ ಚಾಲಕರಿಗೆ ಸಾಲ ನೀಡಿದ್ದ ಫೈನಾನ್ಶಿಯರ್ಗಳು ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಮೊದಲೇ ಗ್ರಾಹಕರಿಲ್ಲದೆ ಸಂಕಷ್ಟದಲ್ಲಿರುವ ಹೆಚ್ಚಿನ ಆಟೋ ಚಾಲಕರು, ಫೈನಾನ್ಶಿಯರ್ಗಳ ಕಿರುಕುಳ ತಾಳಲಾರದೆ ಆಟೋ ಓಡಿಸುವುದನ್ನೇ ಬಿಟ್ಟು ತಮ್ಮೂರುಗಳನ್ನು ಸೇರಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 7.75 ಲಕ್ಷ ಆಟೋ ಹಾಗೂ ಟ್ಯಾಕ್ಸಿ ಚಾಲಕರಿದ್ದಾರೆ. ಈ ಪೈಕಿ ಬೆಂಗಳೂರು ಮಹಾನಗರದಲ್ಲೇ ಸುಮಾರು 2 ಲಕ್ಷ ಆಟೋ ಚಾಲಕರಿದ್ದಾರೆ. ಲಾಕ್ಡೌನ್ಗೂ ಮುನ್ನ ಈ ಆಟೋ ಚಾಲಕರು ಪ್ರತೀ ದಿನ ಸರಾಸರಿ 800 ರಿಂದ 1 ಸಾವಿರ ರೂ.ಯವರೆಗೆ ಸಂಪಾದನೆ ಮಾಡುತ್ತಿದ್ದರು. ಆದರೆ, ಈಗ 200 ರಿಂದ 300 ರೂ. ದುಡಿಯುವುದೂ ಇವರಿಗೆ ಕಷ್ಟವಾಗಿದೆ. ಕೊರೊನಾ ಭಯದಿಂದ ಗ್ರಾಹಕರ ಕೊರತೆ ಒಂದೆಡೆಯಾದರೆ, ಸಿನಿಮಾ, ಕ್ಲಬ್, ರೆಸ್ಟೋರೆಂಟ್, ಐಟಿ-ಬಿಟಿ ಕಂಪನಿ, ಗಾರ್ಮೆಂಟ್ಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದಿರುವುದು, ಶಾಲಾ- ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಚಟುವಟಿಕೆಗಳು ಸ್ಥಗಿತಗೊಂಡಿರುವುದು ಮತ್ತು ನಗರಕ್ಕೆ ಹೊರ ರಾಜ್ಯದಿಂದ ಪ್ರವಾಸಿಗರು ಬಾರದೆ ಇರುವುದು ಆಟೋ ಚಾಲಕರಿಗೆ ಗ್ರಾಹಕರ ಕೊರತೆಯಾಗಲು ಪ್ರಮುಖ ಕಾರಣವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ, ಒಂದು ಬಾಡಿಗೆಗಾಗಿ ಎರಡರಿಂದ ಮೂರು ಗಂಟೆಗಳ ಚಾಲಕರು ಆಟೋ ಸ್ಟ್ಯಾಂಡ್ನಲ್ಲಿ ಕಾಯಬೇಕಾಗಿದೆ. ಐಟಿ-ಬಿಟಿ ಕಂಪೆನಿಗಳಿರುವ ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಸಿಲ್ಕ್ ಬೋರ್ಡ್, ಮಾರತ್ ಹಳ್ಳಿ, ಬೆಳ್ಳಂದೂರು, ಕೈಗಾರಿಕಾ ಪ್ರದೇಶಗಳಾದ ಪೀಣ್ಯ, ಯಶವಂತಪುರ, ರಾಜಾಜಿನಗರ, ಮೈಸೂರು ರೋಡ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಟೋ ಸೇವೆಯಲ್ಲಿ ವ್ಯತ್ಯಯವಾಗಿದೆ. ಗಂಟೆಗಟ್ಟಲೆ ಕಾದರೂ ಬಾಡಿಗೆ ಸಿಗದೆ ಚಾಲಕರು ಪರದಾಡುತ್ತಿದ್ದಾರೆ.
ಎಲ್ಲಾ ಆಟೋ ಚಾಲಕರಿಗೆ ಪರಿಹಾರ ಸಿಕ್ಕಿಲ್ಲ!