ಬೆಂಗಳೂರು:ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ಜೀವ ವಿಮೆ ಹಾಗೂ ಅಪಘಾತ ಪರಿಹಾರ ಯೋಜನೆ ಮತ್ತು ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.
ಗಿಗ್ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಎರಡು ಲಕ್ಷ ರೂ.ಗಳ ಜೀವ ವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು ಒದಗಿಸುವ, "ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ"ಯನ್ನು ಹಾಗೂ ದಿನಪತ್ರಿಕೆ ವಿತರಿಸುವ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಎರಡು ಲಕ್ಷ ರೂ.ಗಳ ಅಪಘಾತ ಪರಿಹಾರ ಸೌಲಭ್ಯ ಹಾಗೂ ಒಂದು ಲಕ್ಷ ರೂ.ಗಳವರೆಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ, ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ಗಿಗ್ ಕಾರ್ಮಿಕರನ್ನು ಯೋಜನೆಯಡಿ ನೋಂದಾಯಿಸಲು ಕಾರ್ಯವ್ಯಾಪ್ತಿಯ ಹಿರಿಯ ಕಾರ್ಮಿಕ ನಿರೀಕ್ಷಕರು/ಕಾರ್ಮಿಕ ನಿರೀಕ್ಷಕರುಗಳನ್ನು ನೋಂದಣಾಧಿಕಾರಿಯಾಗಿ ಹಾಗೂ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಲು ರಚಿಸಿರುವ ಅನುಮೋದನಾ ಸಮಿತಿಗೆ ಕಾರ್ಮಿಕ ಅಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ನೇಮಿಸಿ ಅಧಿಸೂಚಿಸಲಾಗಿದೆ.