ಬೆಂಗಳೂರು:ಕನ್ನಡ ನಾಡಲ್ಲೇ ಕನ್ನಡ ಬಳಕೆ ಕಡಿಮೆಯಾಗ್ತಿರೋದರ ಬಗ್ಗೆ ಬಿಬಿಎಂಪಿ ಮೇಯರ್ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದೇ ಈ ಕುರಿತ ನಿಯಮವೊಂದನ್ನು ಕಡ್ಡಾಯ ಮಾಡಲು ಮೇಯರ್ ಹೊರಟಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂಗಡಿ ಮತ್ತಿತರರ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳಿದ್ದರೆ ಮಾತ್ರ ಉದ್ಯಮಗಳಿಗೆ ಪರವಾನಗಿ ನೀಡಲು ತೀರ್ಮಾನಿಸಿದ್ದಾರೆ.
ಯಾವುದೇ ಹೊಸ ಉದ್ಯಮಗಳ ಬೊರ್ಡ್‌ಗಳಲ್ಲಿ ಕನ್ನಡವಿದ್ದರೆ ಮಾತ್ರ ಲೈಸೆನ್ಸ್ ನೀಡಲು ನಿರ್ಧರಿಸಲಾಗಿದೆ. ಬೋರ್ಡ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ ಕನ್ನಡವಿರಬೇಕು. ಅದನ್ನು ಸ್ಪಷ್ಟಪಡಿಸಿಕೊಂಡೇ ಪಾಲಿಕೆ ಅಧಿಕಾರಿಗಳು ಟ್ರೇಡ್ ಲೈಸೆನ್ಸ್ ನೀಡಬೇಕು.
ಕನ್ನಡದಲ್ಲಿ ನಾಮಫಲಕ ಇದ್ರೇ ಮಾತ್ರ ವಾಣಿಜ್ಯ ಮಳಿಗೆಗಳಿಗೆ ಲೈಸೆನ್ಸ್.. ಬಿಬಿಎಂಪಿ ಮೇಯರ್ ತೀರ್ಮಾನ ನವೆಂಬರ್ 1ರಿಂದ ಕನ್ನಡ ನಾಮಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಾಮಫಲಕಕ್ಕೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ. ಪಾಲಿಸದೇ ಇರುವವರ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
2017ರಲ್ಲಿ ಸುತ್ತೋಲೆ ಹೊರಡಿಸಿದ್ದ ಬಿಬಿಎಂಪಿ ನಾಮಫಲಕದಲ್ಲಿ ಶೇ. 60ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಟ್ಟಿರಬೇಕು ಎಂದು ತಿಳಿಸಿತ್ತು. ಆ ಸುತ್ತೋಲೆಯನ್ನು ಪ್ರಶ್ನಿಸಿ ಕೆಲ ಅಂಗಡಿ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದೇಶ ಪಾಲಿಸಲು ಯಾವುದೇ ರೀತಿಯ ಕಾನೂನುಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಮಹಾರಾಷ್ಟ್ರ ಹಾಗೂ ತಮಿಳುನಾಡಿನ ಕೆಲವು ಪಾಲಿಕೆಗಳಲ್ಲಿ ಮಾತೃಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಮಾದರಿಯಲ್ಲೇ ಬಿಬಿಎಂಪಿಯಲ್ಲಿ ಕಾನೂನು ಮಾಡಲು ಮೇಯರ್ ತೀರ್ಮಾನಿಸಿದ್ದಾರೆ. ಇವರ ತೀರ್ಮಾನವನ್ನ ಕನ್ನಡ ಪರ ಹೋರಾಟಗಾರರು ಸ್ವಾಗತಿಸಿದ್ದಾರೆ.