ಹಾವೇರಿ :ಅಧಿಕಾರ ಹಂಚಿಕೆ ವಿಚಾರ ಜನರ ಸಮಸ್ಯೆಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರರಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆಗಳಿಗೆ ಸಂಪೂರ್ಣ ತೆರೆ ಎಳೆಯಬೇಕಾಗಿದೆ. ಈ ಕುರಿತಂತೆ ಸಿಎಂ ಮಾತನಾಡುತ್ತಾರೆ. ನಾನಂತೂ ಇದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಜನರ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಮಾತನಾಡೋಣಾ. ಅಧಿಕಾರ ಹಂಚಿಕೆ, ಬಣ ರಾಜಕೀಯ ಪಕ್ಷ ನೋಡಿಕೊಳ್ಳುತ್ತೆ. ಹೈಕಮಾಂಡ್ ತಾಕೀತು ಮಾಡಿದ ನಂತರ, ಕೆಲವರು ಬಣ ರಾಜಕಾರಣ ಮಾತನಾಡುತ್ತಿರುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನಂತೂ ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಬಾರದು ಎಂಬ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ 45 ಲಕ್ಷ ಕಾರ್ಡ್‌ಗಳನ್ನ ವಿತರಿಸಿದೆ. ಡಿ ಕೆ ಶಿವಕುಮಾರ್ ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರನ್ನೇ ಕೇಳಿಕೊಳ್ಳಿ ಎಂದು ಲಾಡ್ ಜಾರಿಕೊಂಡರು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ತಡೆಹಿಡಿಯುತ್ತೇವೆ ಎಂದು ಅವರು ಹೇಳಿದರು.
ಕಾರ್ಮಿಕ ಇಲಾಖೆಯ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಇದೆ. ಸುಮಾರು 45 ಲಕ್ಷ ಕಾರ್ಮಿಕ ಕಾರ್ಡ್ ಇವೆ ಎಂದರೆ ಕಾರ್ಮಿಕ ಒಕ್ಕೂಟಗಳ ಅಳಲೇನು ಅಂದರೆ ಪ್ರತಿಶತ 60 ರಿಂದ 70 ರಷ್ಟು ನಕಲಿ ಕಾರ್ಮಿಕ ಕಾರ್ಡ್ಗಳಿವೆ ಎಂದು ಸಂತೋಷ್ ಲಾಡ್ ತಿಳಿಸಿದರು. ನಮ್ಮ ಇಲಾಖೆಯಲ್ಲಿ ಸಾಕಷ್ಟು ಹಣ ಇದೆ ಎಂದು ಬಹಳಷ್ಟು ಕಾರ್ಡ್ಗಳು ಮಾಡಿಕೊಂಡಿದ್ದಾರೆ. ಹೀಗಾಗಿ ಅಧ್ಯಯನ ಆರಂಭ ಮಾಡಿದ್ದು, ಈ ವರ್ಷ 13 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ಆರು ಲಕ್ಷ ಹೊರತುಪಡಿಸಿ ಸುಮಾರು 7 ಲಕ್ಷ ಕಾರ್ಡ್‌ಗಳಿಗೆ ಸ್ಕಾಲರ್‌ಶಿಪ್ ನೀಡಲಾಗುವುದು. ಇದನ್ನ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.