ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು ನವದೆಹಲಿ/ ಬೆಂಗಳೂರು:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್ಗೆ ಕಳಿಸೋಣ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗರಂ ಆದರು.
ಮಂಗಳವಾರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಖರ್ಗೆ ಅವರ ಬಣ್ಣ ಮತ್ತು ತಲೆಗೂದಲು ಬಗ್ಗೆ ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆ ಕುರಿತು ದೆಹಲಿಯಲ್ಲಿ ಬುಧವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ''ಬೆಂಗಳೂರಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಉತ್ತಮವಾಗಿದೆ. ಅದು ಫಸ್ಟ್ ಕ್ಲಾಸ್ ಆಗಿದೆ. ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ'' ಎಂದು ಕಿಡಿಕಾರಿದರು.
''ಮಂತ್ರಿಗಳು ಸೇರಿ ಕರ್ನಾಟಕದ ಸುಮಾರು 50 ಮಂದಿ ನಾಯಕರ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಎಲ್ಲ ರಾಜ್ಯದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಕರ್ನಾಟಕದ ಸಭೆ ವಿಶೇಷವೇನಲ್ಲ. ಹಿಂದೆಯೇ ಬೆಂಗಳೂರಲ್ಲಿ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರ ಜೊತೆ ಎಲ್ಲ ಮಂತ್ರಿಗಳ ಫೋಟೋ ಸೆಷನ್ ಕೂಡ ಇತ್ತು. ಉಮಾನ್ ಚಾಂಡಿ ಅವರ ನಿಧನದ ಹಿನ್ನೆಲೆಯಲ್ಲಿ ಆ ಸಭೆ ರದ್ದಾಗಿತ್ತು. ಅದು ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸಚಿವರ ಪ್ರತ್ಯೇಕ ಸಭೆ ಕೂಡ ನಡೆಯಲಿದೆ. ಲೋಕಸಭೆ ಚುನಾವಣೆ, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ಆಗಲಿದೆ'' ಎಂದು ಅವರು ಹೇಳಿದರು.
''ಬೆಂಗಳೂರು ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ಮೇಲುಸೇತುವೆ ರಸ್ತೆ ನಿರ್ಮಾಣ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆಗೆ ಚರ್ಚೆ ಮಾಡಲಾಗುವುದು ಎಂದು ಡಿಕೆಶಿ ತಿಳಿಸಿದರು.
ಆರಗ ಜ್ಞಾನೇಂದ್ರ ಉಚ್ಛಾಟನೆಗೆ ಆಗ್ರಹ.. ಮತ್ತೊಂದೆಡೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಿಜೆಪಿ ತಕ್ಷಣವೇ ಉಚ್ಛಾಟನೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಆರಗ ಜ್ಞಾನೇಂದ್ರ ಅವರ ಅಭಿಪ್ರಾಯ ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ತೋರಿಸುತ್ತದೆ. ಮೈ ಬಣ್ಣದ ಬಗೆಗಿನ ಈ ಅವಹೇಳನಕಾರಿ ವಿಷಯ ಕೇವಲ ಖರ್ಗೆ ಅವರನ್ನು ಅವಮಾನಿಸಿದ್ದಲ್ಲ. ಖರ್ಗೆ ಅವರ ಹೆಸರಿನಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದು ಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ, ಇಲ್ಲಿನ ಬಿಜೆಪಿ ದಲಿತರನ್ನು ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದನ್ನು ಹೆಗ್ಗಳಿಕೆಯಾಗಿ ನೋಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿಗೆ ಸಭ್ಯ ರಾಜಕಾರಣ ಮಾಡುವುದು ತಿಳಿದೇ ಇಲ್ಲವೇ?. ಇದೇ ಆರಗ ಜ್ಞಾನೇಂದ್ರ ಅವರು ಹಿಂದೆ ತುಳುನಾಡಿನ ನೆಲಮೂಲ ಸಂಸ್ಕೃತಿಯನ್ನು ದೈವಗಳನ್ನು ಅವಮಾನಿಸಿದ್ದರು. ಈಗ ಒಂದೇ ಮಾತಿನಲ್ಲಿ ಉತ್ತರ ಕರ್ನಾಟಕದ ಜನರನ್ನು ದಲಿತ ಸಮುದಾಯವನ್ನು, ಕಪ್ಪು ವರ್ಣದ ಜನರನ್ನು ದೇಶದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಆರಗ ಜ್ಞಾನೇಂದ್ರ ಅವರನ್ನು ಉಚ್ಛಾಟನೆ ಮಾಡಬೇಕು. ಮತ್ತು ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆಗ್ರಹಿಸಿದೆ.
ಇದನ್ನೂ ಓದಿ:ವರ್ಗಾವಣೆ ದಂಧೆಯಲ್ಲಿ ಎಐಸಿಸಿಗೆ ಪಾಲು ನಿಗದಿಪಡಿಸಲು ದೆಹಲಿಯಲ್ಲಿ ಕಾಂಗ್ರೆಸ್ ಸಭೆ: ಛಲವಾದಿ ನಾರಾಯಣಸ್ವಾಮಿ ಆರೋಪ