ಬೆಂಗಳೂರು:ಕಾಂಗ್ರೆಸ್ನವರು ಲಿಂಗಾಯತರ ಬಗ್ಗೆ ಬಹಳ ಮಾತನಾಡಿದ್ದಾರೆ. ಈಗ ಲಿಂಗಾಯತ ನಾಯಕರಿಗೆ ಯಾವ ಸ್ಥಾನ ಕೊಡುತ್ತಾರೆ ನೋಡೊಣ ಎಂದು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಆರ್ ಟಿ ನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಮತ್ತು ರಾಜ್ಯದ ಅಭಿವೃದ್ಧಿ ಮಾಡಲಿ. ಅವರಿಗೆ ಇಲ್ಲಿಯವರೆಗೂ ಮುಖ್ಯಮಂತ್ರಿ ಆಯ್ಕೆ ಮಾಡಲು ಆಗುತ್ತಿಲ್ಲ. ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಲಿ ಎಂದರು.
ಪೂರ್ಣ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ನಿರ್ಧಾರ ಮಾಡದೇ ಇರುವುದು ಪಕ್ಷದಲ್ಲಿನ ಹೊಂದಾಣಿಕೆ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ತಮ್ಮ ರಾಜಕೀಯ ಬಿಟ್ಟು ಆದಷ್ಟು ಬೇಗ ಮುಖ್ಯಮಂತ್ರಿ ಆಯ್ಕೆ ಮಾಡಿ, ಸರ್ಕಾರ ರಚಿಸಿ ಜನರ ಸೇವೆ ಮಾಡಲಿ ಎಂದರು.
ಲಿಂಗಾಯತರಿಗೆ ಯಾವ ಹುದ್ದೆ ನೀಡುತ್ತಾರೆ ನೋಡೋಣ: ಲಿಂಗಾಯತ ಸಮುದಾಯದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಬಹಳ ಮಾತನಾಡಿದ್ದಾರೆ. ಅವರು ಲಿಂಗಾಯತ ನಾಯಕರಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಯಾವ ಯಾವ ಹುದ್ದೆಗಳನ್ನು ಕೊಡುತ್ತಾರೆ ಕಾದು ನೋಡೋಣ ಎಂದು ಹೇಳಿದರು.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನಾಳೆ ಪ್ರಮಾಣ ವಚನ ಸ್ವೀಕಾರ:ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಗುರುವಾರ (ಮೇ 18) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಬುಧವಾರ ತಿಳಿಸಿವೆ. ಗುರುವಾರ ಮಧ್ಯಾಹ್ನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯುತ್ತದೆ ಎಂದು ಎಐಸಿಸಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.