ಬೆಂಗಳೂರು: ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ ಸೇರಿದಂತೆ ದೇವರಬೀಸನಹಳ್ಳಿ ಹಾಗೂ ಬೆಳ್ಳಂದೂರು ಸುತ್ತಮುತ್ತಲ ಗ್ರಾಮಗಳಲ್ಲಿ 4.34 ಎಕರೆ ಭೂಮಿಯನ್ನು ಸಿಎಂ ಯಡಿಯೂರಪ್ಪ ಡಿನೋಟಿಫೈ ಮಾಡಿದ್ದಾರೆ. ಅವರ ಡಿನೋಟಿಫಿಕೇಶನ್ ಕರ್ಮಕಾಂಡ ಬಗೆದಷ್ಟು ಹೊರ ಬರುತ್ತಿದೆ. ಹಾಗಾಗಿ ಯಡಿಯೂರಪ್ಪಗೆ ನೈತಿಕತೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆ ಎದುರಿಸಲಿ ಎಂದು ಆಪ್ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆನ್ನಿಗಾನಹಳ್ಳಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಯಡಿಯೂರಪ್ಪ ಅವರಿಗೆ ಅನುಕೂಲ ಮಾಡಿಕೊಡಲು ಕಾನೂನು ವಿಭಾಗ ಮೇಲ್ಮನವಿ ಸಲ್ಲಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಯಡಿಯೂರಪ್ಪನವರ ಅನೇಕ ಹಗರಣಗಳು ಹೊರ ಬರದಂತೆ ಹೀಗೆಯೇ ತಡೆದಿರುವ ಅನುಮಾಗಳಿವೆ ಎಂದರು.
ಡಿಸೆಂಬರ್ 22 ಮತ್ತು ಜನವರಿ 5ರಂದು, ಕೇವಲ 15 ದಿನಗಳ ಅಂತರದಲ್ಲಿ ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿರುವ ಮುಖ್ಯಮಂತ್ರಿಯೊಬ್ಬರು ಈ ರೀತಿ ಗುರುತರ ಆರೋಪ ಎದುರಿಸುತ್ತಿದ್ದಾರೆ. ಆದ ಕಾರಣ ಈ ಪ್ರಕರಣದ ತನಿಖೆಯನ್ನು ವಿಶೇಷ ಪೊಲೀಸ್ ಹಾಗೂ ನ್ಯಾಯಾಂಗ ತಂಡ ರಚಿಸಿ ಅದರ ನಿಗಾವಣೆಯಲ್ಲಿಡಬೇಕು. ಅಧಿಕಾರ ಕೇಂದ್ರದ ಉನ್ನತ ಸ್ಥಾನದಲ್ಲಿರುವ ಯಡಿಯೂರಪ್ಪ ಅವರು ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಅಸಾಧ್ಯ ಎಂದರು.