ಬೆಂಗಳೂರು: ತಮ್ಮ ಊರುಗಳಿಗೆ ಹೋಗಲು ಇಚ್ಛಿಸಿದ ವಲಸಿಗ ಕಾರ್ಮಿಕರಿಂದಲೇ ಬಸ್ ಪ್ರಯಾಣದ ವೆಚ್ಚ ವಸೂಲಿ ಮಾಡುವ ಸರ್ಕಾರದ ನಡೆಯ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್‌ಗಳ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಪ್ರಯಾಣ ವೆಚ್ಚವನ್ನು ಸ್ವತಃ ಕಾರ್ಮಿಕರೇ ಭರಿಸಬೇಕೆಂದು ತೀರ್ಮಾನಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ 40 ದಿನಗಳಿಂದ ಕೆಲಸವಿಲ್ಲದೆ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ದಿನ ಕಳೆದಿದ್ದಾರೆ. ಬಸ್ ಟಿಕೆಟ್‌ಗೆ ಹಣವೂ ಇಲ್ಲದ ಅವರ ಜೊತೆ ಅಮಾನವೀಯವಾಗಿ ವರ್ತಿಸದೇ ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.