ಬೆಂಗಳೂರು:ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆಯನ್ನು ಕೆಪಿಸಿಸಿ ಕಚೇರಿಯಲ್ಲಿ ಇಂದು ಆಚರಿಸಲಾಯಿತು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಇದ್ದರು.
ದೇಗುಲ ತೆರೆಯುವ ಸಂಬಂಧ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಸರ್ಕಾರದ ತೀರ್ಮಾನ, ನಾವೇನು ಮಾಡೋಣ. ನಮ್ಮನ್ನೇನು ಅವರು ಕೇಳಲಿಲ್ಲ. ಎಲ್ಲದಕ್ಕೂ ಅವರೇ ಜವಾಬ್ದಾರಿ. ರೈತರನ್ನ, ಕಾರ್ಮಿಕರನ್ನ ಹೇಗೆ ನಡೆಸಿಕೊಂಡರು ಎಂಬುದು ಗೊತ್ತಿದೆ. ಅವರೇ ನಿರ್ಧಾರ ತೆಗೆದುಕೊಳ್ಳಲಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿದ್ಯುತ್ ತಿದ್ದುಪಡಿ ಮಸೂದೆ ಜಾರಿ:
ವಿದ್ಯುತ್ ತಿದ್ದುಪಡಿ ಮಸೂದೆ ಬಗ್ಗೆ ಮಾತನಾಡಿದ ಡಿಕೆಶಿ, ಅವರು ಏನ್ ಮಾಡುತ್ತಾರೆ ಮಾಡಲಿ. ನಾವು ಹಿರಿಯರೆಲ್ಲ ಒಟ್ಟಿಗೆ ಸಭೆ ಸೇರುತ್ತೇವೆ. ಅಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳುತ್ತೇವೆ ಎಂದರು.
ಜೂನ್ 1ರಿಂದ ದೇವಸ್ಥಾನ ಮರಳಿ ತೆರೆಯುವ ವಿಚಾರವಾಗಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಕೊರೊನಾ ಲಾಕ್ಡೌನ್ ಆಗಿ 60 ದಿನ ಆಯಿತು. ಯಾವುದೇ ಮುಂದಾಲೋಚನೆ ಇಲ್ಲದೇ ತೀರ್ಮಾನ ಕೈಗೊಳ್ಳಲಾಗಿದೆ. ದೇಗುಲ, ಚರ್ಚ್ ತೆರೆದರೇ ತಪ್ಪಿಲ್ಲ. ಆದರೆ, ಹಣಕ್ಕಾಗಿ ಬಾಗಿಲು ತೆರೆಯುವುದು ತಪ್ಪು. ಯಾವ ದೇವಸ್ಥಾನಗಳಲ್ಲಿ ಹೆಚ್ಚಿನ ಹಣ ಸಿಗುತ್ತದೆಯೋ ಆ ದೇವಸ್ಥಾನಗಳನ್ನು ತೆರೆದರೆ ತಪ್ಪಾಗುತ್ತದೆ ಎಂದು ಹೇಳಿದರು.
ರೆಸ್ಟೋರೆಂಟ್, ಹೊಟೇಲ್ಗಳಲ್ಲಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವುಗಳನ್ನು ತೆರೆಯಲು ಅವಕಾಶ ನೀಡಿದರೇ ಉಪಯೋಗವಾಗಲಿದೆ. ಸಿಎಂ ಯಡಿಯೂರಪ್ಪ ಒಂದೇ ಒಂದು ಸತ್ಯದ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರು ದೇಶಕ್ಕೆ ಮಾದರಿ ನಗರ ಅಂತ. ಇದು ಸತ್ಯವಾದ ಮಾತು. ದೇಶಕ್ಕೆ ಮಾದರಿ ರಾಜ್ಯ ಗುಜರಾತ್ ಅಂತ ಹೇಳಿಲಿಲ್ಲ. ಬೆಂಗಳೂರಿನಲ್ಲಿ ಉತ್ತಮ ಸೌಲಭ್ಯ ಇರುವುದರಿಂದ ಹೀಗೆ ಹೇಳಿದ್ದಾರೆ ಎಂದರು.