ಕರ್ನಾಟಕ

karnataka

ETV Bharat / state

CD case: ರಮೇಶ್ ಜಾರಕಿಹೊಳಿ ಬಂಧನ, ಬೊಮ್ಮಾಯಿ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ

CD ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು. ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ಪ್ರಕರಣ ತನಿಖೆ ಆಗಬೇಕು. SIT ತನಿಖೆಗೆ ತಡೆ ನೀಡಬೇಕು. ರಮೇಶ್ ಪರ ಮಾತನಾಡಿದ ಸಚಿವರು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕು. ರಮೇಶ್​ಗೆ ಸಹಾಯ ಮಾಡಿದ ರಾಜಕಾರಣಿಗಳು, ಅಧಿಕಾರಿಗಳು ಯಾರು ಎಂಬುದು ಬಹಿರಂಗ ಆಗಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

let-ramesh-zaraki-holly-be-arrested-bommayi-resign-siddaramaiah-insists
ಸಿದ್ದರಾಮಯ್ಯ

By

Published : May 27, 2021, 4:36 PM IST

ಬೆಂಗಳೂರು:ದೂರು ದಾಖಲಾದ 60 ದಿನಗಳಲ್ಲಿ ವಿಚಾರಣೆ ಮುಗಿಸಬೇಕು. ಆದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದಲ್ಲಿ ಇದು ಆಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮತ್ತಿತರ ನಾಯಕರ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ಬೆಳಕಿಗೆ ಬಂದು ಮೂರು ತಿಂಗಳಾಗಿದೆ. ಮಾರ್ಚ್ 2ರಂದು ಲೈಂಗಿಕ ಹಗರಣ ಹೊರ ಬಂತು. ದಿನೇಶ್ ಕಲ್ಲಹಳ್ಳಿ ಎಂಬಾತ ಪೊಲೀಸ್ ಕಮಿಷನರ್​ಗೆ ದೂರು ಕೊಡಲು ಹೋಗುತ್ತಾರೆ. ಅವರು ದೂರು ತೆಗದುಕೊಳ್ಳಲ್ಲ, ಕಬ್ಬನ್ ಪಾರ್ಕ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳುತ್ತಾರೆ. ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ದೂರು ತೆಗದುಕೊಂಡು ಎಫ್​ಐಆರ್ ಹಾಕಿಲ್ಲ. ಬಳಿಕ ಎಲ್ಲಾ ಮಾಧ್ಯಮಗಳಲ್ಲೂ ಸಿಡಿ ಪ್ರಸಾರವಾಗುತ್ತೆ. ಆಗ ಅದೊಂದು ನಕಲಿ ಸಿಡಿ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾರೆ ಎಂದು ವಿವರಿಸಿದರು.

ನನ್ನ ತೇಜೋವಧೆ ಮಾಡಲು ಸಿಡಿ ಸೃಷ್ಟಿಸಿದ್ದಾರೆ ಎಂದು ಅಂದು ರಮೇಶ್​ ಜಾರಕಿಹೊಳಿ ಹೇಳಿದ್ದರು. ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದು ಸಿಡಿ ಬಿಡುಗಡೆ ಆದ ದಿನ ಹೇಳಿದ್ದರು. ಬಳಿಕ ಮಾರ್ಚ್ 3 ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಮಾರ್ಚ್ 5ರಂದು ಆರು ಜನ ಸಚಿವರು ಕೋರ್ಟ್ ನಿಂದ ತಡೆಯಾಜ್ಞೆ ತಂದರು. 67 ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತರುತ್ತಾರೆ. ದಿನೇಶ್ ಕಲ್ಲಹಳ್ಳಿಗೆ ಭಯ ಉಂಟು ಮಾಡಿದ್ದಾರೆ. ಮಾರ್ಚ್ 7 ರಂದು ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಲು ನಿರ್ಧಾರ ಮಾಡುತ್ತಾರೆ. ಮಾರ್ಚ್ 9 ರಂದು ಗೃಹ ಸಚಿವರಿಗೆ ರಮೇಶ್ ಜಾರಕಿಹೊಳಿ ಪತ್ರ ಬರೆಯುತ್ತಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಆ ಸಿಡಿಯಲ್ಲಿರೋದು ನಾನಲ್ಲ ಎಂದು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬಳಿಕ ಗೃಹ ಸಚಿವರು ಎಸ್​ಐಟಿ ತಂಡ ರಚನೆ ಮಾಡಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಚಾರಣೆ ಮಾಡಿ ಸರ್ಕಾರಕ್ಕೆ ವರದಿ ಕೊಡಲಿ ಎಂದು ಹೇಳುತ್ತಾರೆ. ಸರ್ಕಾರಕ್ಕೆ ವರದಿ ಕೊಡಲು ಬರಲ್ಲ. ತನಿಖೆ ಮಾಡಿ ಎಫ್​ಐಆರ್ ರಿಜಿಸ್ಟರ್ ಆಗ್ಬೇಕು. ಬಳಿಕ ಚಾರ್ಜ್ ಶೀಟ್ ಕೋರ್ಟ್​ನಲ್ಲಿ ಫೈಲ್ ಮಾಡಬೇಕು. ಇದು ಕಾನೂನು ವ್ಯಾಪ್ತಿಯಲ್ಲಿ ಇರುವ ಹಂತ ಎಂದು ಪ್ರಕರಣದ ಕುರಿತು ಎಳೆಎಳೆಯಾಗಿ ವಿವರಿಸಿದರು.

ದೇಶದ ಇತಿಹಾಸದಲ್ಲಿ ರೇಪ್ ಕೇಸ್​ನಲ್ಲಿ ಆರೋಪಿಯನ್ನು ಬಂಧಿಸುತ್ತಾರೆ. ಆದರೆ ರಮೇಶ್ ಜಾರಕಿಹೊಳಿ ಮಾತ್ರ‌ ಬಂಧನಕ್ಕೆ ಒಳಗಾಗಿಲ್ಲ. ಸರ್ಕಾರದ ಭದ್ರತೆ ಇದೆ. ಇಂದಿಗೂ ಅವರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಪೊಲೀಸರು ಬಂಧಿಸಿಲ್ಲ. ಸರ್ಕಾರಕ್ಕೆ ಬಂಧಿಸಬೇಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಎಸ್ಐಟಿ ತನಿಖಾಧಿಕಾರಿ ಸೌಮೇಂದು ಮುಖರ್ಜಿಗೆ ರಜೆ ನೀಡಿ ಕಳುಹಿಸಲಾಗಿದೆ. ಕಳೆದ ಶನಿವಾರ ರಮೇಶ್ ಜಾರಕಿಹೊಳಿ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಎರಡು ಗಂಟೆಗೂ ಹೆಚ್ಚು‌ ಸಮಯ‌ ಚರ್ಚಿಸಿದ್ದಾರೆ. ಸಚಿವರಾದ ಸುಧಾಕರ್ ಹಾಗೂ ಬಿ.ಎ. ಬಸವರಾಜ್ ಇಬ್ಬರೂ ಆಗ ಇದ್ದರು. ಇದಾದ ಬಳಿಕ ಕೇಂದ್ರ‌ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನೂ ಭೇಟಿಯಾಗಿ‌ ಚರ್ಚಿಸಿದ್ದಾರೆ. ರೇಪ್ ಆರೋಪ ಹೊತ್ತಿರುವ ವ್ಯಕ್ತಿ ಗೃಹ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದು ಇದೇ ಮೊದಲು ಅನ್ನಿಸುತ್ತದೆ ಸಿದ್ದರಾಮಯ್ಯ ಹೇಳಿದ್ರು.

ಕಾನೂನಿನಲ್ಲಿ ಅಗತ್ಯವಿರುವ ಡಿಎನ್ಎ ತಪಾಸಣೆ ಮಾಡಿಲ್ಲ, ಶುಗರ್, ಬಿಪಿ ಟೆಸ್ಟ್ ಮಾತ್ರ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತನಿಖೆ ವಿಳಂಬವಾಗುತ್ತಿದೆ. ಕೂಡಲೇ ರಮೇಶ್ ಜಾರಕಿಹೊಳಿ ಬಂಧನ ಆಗಬೇಕು. ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ಪ್ರಕರಣ ತನಿಖೆ ಆಗಬೇಕು. ಎಸ್ಐಟಿ ತನಿಖೆಗೆ ತಡೆ ನೀಡಬೇಕು. ರಮೇಶ್ ಪರ ಮಾತನಾಡಿದ ಸಚಿವರು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕು. ರಮೇಶ್​ಗೆ ಸಹಾಯ ಮಾಡಿದ ರಾಜಕಾರಣಿಗಳು, ಅಧಿಕಾರಿಗಳು ಯಾರು ಎಂದು ಬಹಿರಂಗ ಆಗಬೇಕೆಂದು ಒತ್ತಾಯಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹಮದ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details