ಬೆಂಗಳೂರು:ಪಕ್ಷದ ಹಾಗೂ ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ಸಾರಥ್ಯವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳುವುದು ಸೂಕ್ತ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಶಯ ವ್ಯಕ್ತಪಡಿಸಿರುವ ಅವರು, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಹಿರಿಯ ನಾಯಕರ ಅನುಭವಪೂರ್ಣ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಆಶಯವೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಳೆ ದಿಲ್ಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಬಿಜೆಪಿಯ ಟೀಕೆಗಳಿಗೆ ಉತ್ತರ ಕೊಡಲು ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ನಿರ್ಧರಿಸುವುದಾಗಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಖುದ್ದು ಪಕ್ಷದ ನೇತೃತ್ವ ದಿಂದ ಹಿಂದೆ ಸರಿಯುವ ಮಾತನ್ನು ಕೂಡ ಅವರು ಆಡಿದ್ದಾರೆ. ಈ ಹಿನ್ನೆಲೆ ಅವರ ನಿರ್ಧಾರ ದೃಢವಾಗಿದ್ದರೆ, ಪಕ್ಷದ ಸಾರಥ್ಯವನ್ನು ಬೇರೊಬ್ಬರಿಗೆ ನೀಡುವ ಬದಲು ರಾಹುಲ್ ಗಾಂಧಿಯವರ ಮನವೊಲಿಸಿ ಅವರಿಗೆ ಜವಾಬ್ದಾರಿ ನೀಡಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.