ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಗುಂಡಿಗಳ ನಗರ ಎಂದು ಬಿರುದು ನೀಡಿ ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಮೋದಿ ಬರ್ತಿದ್ದಾರೆಂದು ಗುಂಡಿ ಮುಚ್ಚುತ್ತಿದ್ದಾರೆ: ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಸಂಚರಿಸುವ ರಸ್ತೆಗಳ ಗುಂಡಿಗಳನ್ನ ಮುಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿನ ಜನರ ಹಿತವನ್ನು ನೆನಪಿಸಿಕೊಳ್ಳದೇ, ಈಗ ಪ್ರಧಾನಿ ಮೋದಿ ಬರ್ತಿದ್ದಾರೆ ಎಂದು ಗುಂಡಿ ಮುಚ್ಚಲು ಹೊರಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಧಾನಿ ಅವರು ಬೆಂಗಳೂರಿಗೆ ಒಂದು ಬಹುಮಾನ ಕೊಟ್ಟು ಹೋಗಲಿ. ಗುಂಡಿ ನಗರ ಅಂತಾದರೂ ಕರೆಯಲಿ ಅಥವಾ ಬೆಸ್ಟ್ ಸಿಟಿ ಎಂದಾದ್ರೂ ಕರೆಯಲಿ. ಅವರಿಗೆ ಏನು ಮಾಹಿತಿ ಇದೆಯೋ ಆ ರೀತಿ ಭ್ರಷ್ಟಾಚಾರದ ರಾಜಧಾನಿ ಅಂತನಾದರೂ ಕರೆಯಲಿ ಎಂದು ಡಿಕೆಶಿ ಟಾಂಗ್ ನೀಡಿದ್ದಾರೆ.
ಬಿಜೆಪಿ ವೀಕ್ ಆಗಿದೆ ಅನಿಸುತ್ತದೆ:ಕಾಲೇಜು ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೊರಡಿಸಿದ್ದಾರೆ. ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಲು ಆದೇಶ ಮಾಡಿದ್ದರು. ಇದು ಸರ್ಕಾರಕ್ಕೆ ಶೇಮ್ ಅಲ್ಲವಾ? ಇದನ್ನು ನೋಡಿದರೆ ಬಿಜೆಪಿ ವೀಕ್ ಆಗಿದೆ ಎಂದು ಅನಿಸುತ್ತದೆ. ರಸ್ತೆ ಗುಂಡಿಗೆ ನೂರಾರು ಜನ ಸತ್ತರು. ಎಲ್ಲ ಪಾರ್ಟಿಯವರು ಗುಂಡಿಗಳ ಹೋಮ ಮಾಡಿದರು, ಪೂಜೆ ಮಾಡಿದ್ರು, ಅಭಿಷೇಕ ಮಾಡಿದರು. ಮೋದಿ ಬರ್ತಿದ್ದಾರೆ ಅಂತ ಗುಂಡಿ ಮುಚ್ಚುತ್ತಿದ್ದಾರೆ ಸಂತೋಷ ಎಂದು ಹೇಳಿದರು.
ಸರ್ಕಾರದ ಹಣದಲ್ಲಿ ಪ್ರತಿಮೆ ಮಾಡಿದ್ದೇ ಅಪರಾಧ: ಏರ್ಪೋರ್ಟ್ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿರುವ ವಿಚಾರವಾಗಿ ಮಾತನಾಡಿ, ಪ್ರತಿಮೆ ಸರ್ಕಾರದ ಹಣದಲ್ಲಿ ಮಾಡಿದ್ದೇ ದೊಡ್ಡ ಅಪರಾಧ. ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಅವರಿಗೆ ನಾವು ಜಾಗ ಕೊಟ್ಟಿದ್ದೇವೆ, ದುಡ್ಡು ಕೊಟ್ಟಿದ್ದೇವೆ. ನಾವು ಏರ್ಪೋರ್ಟ್ಗೆ ಸುಮಾರು ನಾಲ್ಕು ಸಾವಿರ ಎಕರೆಗೂ ಹೆಚ್ಚು ಜಾಗ ನೀಡಿದ್ದೇವೆ. ಇದರಲ್ಲಿ 2000 ಎಕರೆ ಜಮೀನನ್ನೂ ಕೇವಲ ಆರು ಲಕ್ಷಕ್ಕೆ ಕೊಟ್ಟಿದ್ದೇವೆ. ಅವರಿಗೆ ಹೇಳಿದ್ದರೆ ನಿರ್ಮಾಣ ಮಾಡ್ತಿದ್ದರು. ಸರ್ಕಾರದ ದುಡ್ಡಿನಲ್ಲಿ ಕಟ್ಟುವಂತಹ ಅಗತ್ಯತೆ ಏನಿತ್ತು?. ನಾನು ಫೌಂಡೇಶನ್ ಹಾಕಲು ಹೋದಾಗಲೇ ಹೇಳಿದ್ದೆ. ಏರ್ಪೋರ್ಟ್ ಅವರೇ ಮಾಡುತ್ತಿದ್ದರು ಎಂದರು.
ಅವರೇನು ಧರ್ಮಕ್ಕೆ ಮಾಡ್ತಾರಾ?. ಅವರೇನು ಸಂಪಾದನೆ ಮಾಡಿಲ್ಲವೇ? ಅವರ ಆಸ್ತಿಗೆ ಬೆಲೆ ಜಾಸ್ತಿಯಾಗಿದೆ. ವಾಣಿಜ್ಯ ಬಳಕೆಗೆ ಹೆಚ್ಚು ಜಾಗ ನೀಡಿದ್ದೇವೆ. ಅವರೇ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು. ಸರ್ಕಾರ ಕಟ್ಟುವ ಅಗತ್ಯ ಏನಿತ್ತು?. ಮುಖ್ಯ ಕಾರ್ಯದರ್ಶಿಗಳು ಯಾಕೆ ಸುಮ್ಮನೆ ಇದ್ದಾರೆ. ಈಗ ಅವರು ಇದು ಪಕ್ಷದ ಕೆಲಸ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ ಏನು ಮಾಡೋದು ಎಂದು ಹೇಳಿದರು.
ಇದನ್ನೂ ಓದಿ:ಮುಕುಡಪ್ಪ ಮನೆ ಬಾಗಿಲಿಗೆ ಕಪ್ಪು ಮಸಿ ಬಳಿದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಮುಕುಡಪ್ಪ ಅವರು ಸಿದ್ದರಾಮಯ್ಯ ಬಗ್ಗೆ ಅವಹೇಳನವಾಗಿ ಮಾತನಾಡಿದ ವಿಚಾರವಾಗಿ ಮಾತನಾಡಿ, ನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ನನಗೆ ಯಾರು ಹೇಳಿಲ್ಲ. ಇದು ಯಾರೇ ಮಾಡಿದರೂ ಅದು ಅವರ ಖಾಸಗಿ ವಿಚಾರ. ಆ ವಿಚಾರದಲ್ಲಿ ಏನ್ ಮಾತನಾಡಿದ್ದಾರೋ ಗೊತ್ತಿಲ್ಲ. ಅದನ್ನ ತಿಳಿದುಕೊಂಡು ನಾನು ಮಾತನಾಡುತ್ತೇನೆ. ನಮ್ಮ ನಾಯಕರನ್ನ ಡಿಫೇಮ್ ಮಾಡಲು ತಂತ್ರಗಳು ನಡಿತಾ ಇದೆ. ಅದನ್ನು ಮಾತ್ರ ಹೇಳುತ್ತೇನೆ ಎಂದು ಡಿಕೆಶಿ ಹೇಳಿದರು.