ಬೆಂಗಳೂರು: ಕುಟುಂಬ ಸದಸ್ಯರನ್ನು ಕಳೆದುಕೊಂಡು ಜನ ಆತಂಕದಲ್ಲಿರುವ ಸಂದರ್ಭ ಪ್ರಧಾನಿ ನರೇಂದ್ರಮೋದಿ ಎಲ್ಲ ಕಡೆ ತಮ್ಮ ಫೋಟೊ ಬಳಸಿ ಜನಪ್ರಿಯತೆ ಪಡೆಯುತ್ತಿರುವುದು ವಿಪರ್ಯಾಸ ಎಂದು ಸಂಸದ ಡಿ ಕೆ ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜಾಹೀರಾತಿನ ಜತೆ ಸತ್ತವರ ಮರಣ ಪ್ರಮಾಣಪತ್ರದಲ್ಲಿಯೂ ಫೋಟೊ ಹಾಕಿಸಿಕೊಳ್ಳಲಿ. ತಮ್ಮ ಮನೆ ಸದಸ್ಯರು ಯಾರು ಪ್ರಧಾನಿಯಾಗಿದ್ದಾಗ ಅಕಾಲಿಕವಾಗಿ ಮೃತಪಟ್ಟರು ಎಂಬುದನ್ನು ನೆನಪಿಸಿಕೊಳ್ಳಲಿ. ಶಿಕ್ಷಕರನ್ನು ಭಿಕ್ಷುಕರನ್ನಾಗಿಸಿದ ಸರ್ಕಾರ ಇದು. ಜನರ ಜೀವ ಉಳಿಸಿ ಎಂದು ಬೇಡಿಕೊಳ್ಳುತ್ತೇನೆ ಎಂದರು.
ಸಂಸದ ಡಿ ಕೆ ಸುರೇಶ್ ಮಾತನಾಡಿದರು ಹಣ ಕಟ್ಟಿದ್ದರೆ ಹೆಣ ಕೊಡ್ತಾರೆ: ಆಯುಷ್ಮಾನ್ ಭಾರತ್ ಯೋಜನೆ ತಂದಿದ್ದಾರೆ. ಅದು ಎಲ್ಲಿದೆ ಅನ್ನೋದು ಗೊತ್ತಿಲ್ಲ. ಜನರ ಆಯಸ್ಸು ಹೆಚ್ತಿಲ್ಲ, ಹೆಣವಾಗಿ ಬರ್ತಿದ್ದಾರೆ. ಹೆಲ್ತ್ ಸೆಕ್ಯೂರಿಟಿ ಆ್ಯಕ್ಟ್ ಜಾರಿಗೆ ತನ್ನಿ. ಎಲ್ಲರಿಗೂ ಉಚಿತ ಆರೋಗ್ಯ ಸಿಗಬೇಕು. ಖಾಸಗಿ ಆಸ್ಪತ್ರೆಗೆ ಜನ ಹಣ ಕಟ್ಟೋಕೆ ಆಗ್ತಿಲ್ಲ. ಹಣ ಕಟ್ಟಿದ್ದರೆ ಹೆಣ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಆಸ್ಪತ್ರೆಗಳು ಜನರನ್ನ ಸುಲಿಗೆ ಮಾಡ್ತಿವೆ. ವ್ಯಾಕ್ಸಿನ್, ಮೆಡಿಸಿನ್, ಆಕ್ಸಿಜನ್ ನಲ್ಲೂ ಸುಲಿಗೆ ನಡೆಯುತ್ತಿದೆ. ಕೇಂದ್ರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲಿದೆ. ನೀವು ಸರಿಯಾದ ಕಾನೂನು ಯಾಕೆ ತರ್ತಿಲ್ಲ. ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಸೇರಿದವರೆಷ್ಟು, ಸತ್ತವರೆಷ್ಟು. ಇದರ ಬಗ್ಗೆಯೂ ಅಧಿಕೃತ ಮಾಹಿತಿಯಿಲ್ಲ ಎಂದರು.
ಸದಾನಂದಗೌಡರೇ ರಾಸಾಯನಿಕ ಸಚಿವರು. ನನ್ನ ರಾಜ್ಯ ಅಂತ ಅವರು ನಮಗೆ ಪ್ರಯಾರಿಟಿ ಕೊಡಬಹುದು. ಆದರೆ ಯಾವ ಪ್ರಯಾರಿಟಿಯನ್ನೂ ಕೊಡ್ತಿಲ್ಲ. 1550 ವಯಲ್ಸ್ ಕರ್ನಾಟಕಕ್ಕೆ ಕೊಟ್ಟಿದ್ದೇವೆ ಅಂತಾರೆ. ಬ್ಲಾಕ್ ಫಂಗಸ್ ಗೆ ಕೊಟ್ಟಿದ್ದೇವೆ ಅಂತಿದ್ದಾರೆ. ರಾಜ್ಯವನ್ನ ಪ್ರತಿನಿಧಿಸುವವರು ಇದನ್ನಾ ಹೇಳೋದು. ರಾಜ್ಯದಲ್ಲಿ ಭೀಕರ ಪರಿಸ್ಥಿತಿಯಿದೆ. ರಾಸಾಯನಿಕ, ಫೈನಾನ್ಸ್ ಮಿನಿಸ್ಟರ್ ನಮ್ಮವರೇ. ಆದರೆ ರಾಜ್ಯಕ್ಕೆ ಅವರು ಕೊಟ್ಟ ಕೊಡುಗೆಯೇನು? ರಾಜ್ಯದಿಂದ ತೆರಿಗೆ ಹೆಚ್ಚು ಹೋಗುತ್ತದೆ. ಆದರೆ ಪಾಲು ಸಿಗೋದು ಗುಜರಾತ್ ಗೆ ಮಾತ್ರ. ಖಾಸಗಿ ಆಸ್ಪತ್ರೆಯವರು ಹೆಚ್ಚಿನ ವಸೂಲಿ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಯಾಕೆ ಆಗ್ತಿಲ್ಲ ಎಂದು ಪ್ರಶ್ನಿಸಿದರು.
ಮೋದಿ ವಿರುದ್ಧ ವಾಗ್ದಾಳಿ: ಪ್ರಧಾನಿಯವರು ಎಲ್ಲದಕ್ಕೂ ಫೋಟೋ ಹಾಕಿಕೊಳ್ತಾರೆ. ವ್ಯಾಕ್ಸಿನ್ ಕೊಡ್ತಿದ್ದೇನೆ ಅಂತ ಹಾಕಿಕೊಳ್ತಾರೆ. ಕೋವಿಡ್ ನಲ್ಲಿ ಸತ್ತವರ ಫೋಟೋ ಹಾಕಿ. ಡೆತ್ ಮುಂದೆ ನೀವು ಯಾಕೆ ಫೋಟೋ ಹಾಕಿಸಿಕೊಳ್ಳಲ್ಲ. ಇವತ್ತು ಅಪ್ಪ, ಅಮ್ಮನನ್ನ ಕಳೆದುಕೊಂಡಿದ್ದಾರೆ. ಅಣ್ಣ, ತಂಗಿಯನ್ನ ಕಳೆದುಕೊಂಡಿದ್ದಾರೆ. ಮಕ್ಕಳನ್ನ ಕಳೆದುಕೊಂಡು ಜನ ನರಳಾಡ್ತಿದ್ದಾರೆ. ಆದರೆ ನಿಮಗೆ ಪಬ್ಲಿಸಿಟಿಯಷ್ಟೇ ಮುಖ್ಯವಾಗಿದೆ. ಜನ ಔಷಧಿ, ಲಸಿಕೆಯಿಲ್ಲದೆ ಸಾಯ್ತಿದ್ದಾರೆ. ಆದರೆ ನೀವು ಯುಪಿ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ಮಾಡ್ತಿದ್ದೀರ ಎಂದು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಫಂಗಸ್ ಕೇಸ್ ಯಾವ ದೇಶದಲ್ಲೂ ಪತ್ತೆಯಾಗಿಲ್ಲ. ಫಂಗಸ್ ಪತ್ತೆಯಾಗಿದ್ದು ನಮ್ಮಲ್ಲೇ ಮೊದಲು. ಬ್ಲಾಕ್, ವೈಟ್, ಯೆಲ್ಲೋ ಫಂಗಸ್ ಎಲ್ಲಿಂದ ಬಂತು? ಇದರ ಬಗ್ಗೆ ನೀವು ಪತ್ತೆ ಹಚ್ಚಿದ್ದೀರಾ? ಮಾರ್ಚ್ ನಲ್ಲೇ ಬ್ಲಾಕ್ ಫಂಗಸ್ ಕಾಣಿಸಿಕೊಳ್ತು. ಆಗಲೇ ನೀವು ಯಾಕೆ ಸಿದ್ಧತೆ ಮಾಡಿಕೊಳ್ಳಲಿಲ್ಲ. 12 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದೀರಿ. ಜನಸಾಮಾನ್ಯರನ್ನ ಸುಲಿಗೆ ಮಾಡ್ತಿದ್ದೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಆಶಾ ಕಾರ್ಯಕರ್ತರಿಗೆ 4 ತಿಂಗಳಿಂದ ಗೌರವಧನವಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನವಿಲ್ಲ. ಜನರ ತೆರಿಗೆ ಹಣ ಎಲ್ಲಿ ಹೋಗ್ತಿದೆ. ವಿದ್ಯುತ್ ಬಿಲ್,ವಾಟರ್ ಬಿಲ್ ವಿನಾಯ್ತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಸಿಎಂ ಬದಲಾವಣೆ ವಿಚಾರ ಕೇಳಿ ಬರುತ್ತಿದೆ. ಇದು ಖುರ್ಚಿ ಉಳಿಸಿಕೊಳ್ಳಲು ನಡೆಯುತ್ತಿರುವ ಸರ್ಕಾರ. ಇದರಿಂದ ಯಾವುದೇ ಬದಲಾವಣೆ ಆಗಬಹುದು ಎಂಬ ಆತಂಕಕ್ಕೆ ಲಾಕ್ಡೌನ್ ಪರಿಹಾರವಾಗಿ ಸಿಕ್ಕಿದೆ. ಇದರಿಂದ ಸರ್ಕಾರ ಉಳಿಸಿಕೊಳ್ಳಲು ಎಷ್ಟು ದಿನ ಬೇಕಾದರೂ ಲಾಕ್ಡೌನ್ ಮುಂದುವರಿಸಬಹುದು ಎಂದರು.
ಓದಿ:ಮುಖ್ಯಮಂತ್ರಿ ಬದಲಾವಣೆ ಊಹಾಪೋಹ : ಡಿಸಿಎಂ ಲಕ್ಷ್ಮಣ ಸವದಿ