ಬೆಂಗಳೂರು: ಪತ್ತೆಯಾಗಿರುವ ಹಣ ಯಾರದ್ದು ಎಂಬುದು ತನಿಖೆಯಾಗಲಿ. ಆಮೇಲೆ ಯಾರು ಹಾಲಲ್ಲಿದ್ದಾರೆ, ನೀರಲ್ಲಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ. ಐಟಿ ದಾಳಿ ವೇಳೆ ಪತ್ತೆಯಾದ ಹಣ ಕಾಂಗ್ರೆಸ್ನವರದ್ದು ಎಂಬ ಪ್ರತಿಪಕ್ಷಗಳ ಆರೋಪದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಅವರು ಟಾರ್ಗೆಟ್ ಕೊಟ್ಟಿದ್ದಾರೆ ಎನ್ನುವ ಆರೋಪವನ್ನು ಒಪ್ಪಲು ನಾನು ತಯಾರಿಲ್ಲ. ಸುಮಾರು ಎರಡು ತಿಂಗಳ ಹಿಂದೆ ಬಹಳ ಸ್ಪಷ್ಟವಾಗಿ ಎಐಸಿಸಿ, ಭ್ರಷ್ಟಾಚಾರವನ್ನು ಕಿಂಚಿತ್ತೂ ಸಹಿಸಲು ಸಾಧ್ಯವಿಲ್ಲ ಎನ್ನುವ ನಿರ್ದೇಶನವನ್ನು ನೀಡಿತ್ತು. ಹಾಗಾಗಿ ಕೇಂದ್ರದವರು ಚುನಾವಣೆಗಾಗಿ ಹೀಗೆಲ್ಲ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೇವಲ ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿ ಇಲ್ಲ. ಬೇರೆ ರಾಜ್ಯಗಳಲ್ಲೂ ಅಧಿಕಾರದಲ್ಲಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಅವರ ಭ್ರಷ್ಟಾಚಾರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ವಿಜಯೇಂದ್ರ ಅವರಿಗೆ ನೈತಿಕತೆ ಇದೆಯಾ? ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಿ ವೈ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಅಷ್ಟಕ್ಕೂ ಯಡಿಯೂರಪ್ಪ ಅವರನ್ನು ಯಾವ ಆಧಾರದ ಮೇಲೆ ಸಿಎಂ ಸ್ಥಾನದಿಂದ ತೆಗೆದರು. ಈ ಬಗ್ಗೆ ಇದುವರೆಗೂ ಯಾರೂ ಹೇಳಿಲ್ಲ. ಹೀಗಿರುವಾಗ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಕಳೆದುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.