ಬೆಂಗಳೂರು: ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿ ಸವದತ್ತಿ ಶಾಸಕ ಆನಂದ ಮಾಮನಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನನ್ನು ಸಚಿವನಾಗಿ ಮಾಡಬೇಕು ಎಂಬ ಬೇಡಿಕೆ ಇತ್ತು. ಈಗ ಸಂಘ ಪರಿವಾರ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಮನವಿ ಮಾಡುತ್ತೇನೆ. ನಮ್ಮ ತಂದೆಯವರು ವಿಧಾನಸಭೆ ಉಪಾಧ್ಯಕ್ಷರಾಗಿದ್ದವರು. ಆ ಸ್ಥಾನವನ್ನಾದರೂ ನನಗೆ ಕೊಟ್ಟು ರಾಜ್ಯದ ಜನರ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ವಿಧಾನಸಭೆ ಉಪಾಧ್ಯಕ್ಷರ ಸ್ಥಾನ ನೀಡುವಂತೆ ಶಾಸಕ ಆನಂದ ಮಾಮನಿ ಒತ್ತಾಯ ಈ ಸಂಬಂಧ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಸರ್ಕಾರಗಳು ಬದಲಾವಣೆಯಾದ ಸಂದರ್ಭದಲ್ಲಿ ವಿಧಾನಸಭೆ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ ರಾಜೀನಾಮೆ ನೀಡುವುದು ಸಹಜವಾಗಿದೆ. ಹೀಗಾಗಿ ಬಹುಮತ ಇಲ್ಲದೇ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡಿರುವ ಕೃಷ್ಣಾ ರೆಡ್ಡಿ ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನನ್ನನ್ನು ನೇಮಿಸಬೇಕು. ನಮ್ಮಲ್ಲಿ ಬಂಡಾಯ, ಗುಂಪುಗಾರಿಕೆ ಯಾವುದೂ ಇಲ್ಲ. ನಮ್ಮಲ್ಲಿ ಮೂಲ ಹಾಗೂ ವಲಸೆ ಬಿಜೆಪಿಗರು ಎಂಬ ಅಸಮಾಧಾನ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.