ಬೆಂಗಳೂರು/ಬೆಳಗಾವಿ: ನಾಳೆಯಿಂದ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭಗೊಳ್ಳಲಿದ್ದು, ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೂಚಿಸಿದರು.
ಸುವರ್ಣಸೌಧದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಚಿವರು, ಶಾಸಕರು ಸೇರಿದಂತೆ ಯಾರಿಗೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಸಮರ್ಪಕ ವ್ಯವಸ್ಥೆಗೆ ಸೂಚನೆ: ವಸತಿ ಕೊರತೆ ಕಂಡುಬಂದರೆ ಕೂಡಲೇ ವ್ಯವಸ್ಥೆ ಮಾಡಬೇಕು. ವಾಹನ ಚಾಲಕರು, ಮಾರ್ಷಲ್ ಗಳಿಗೆ ಸಮರ್ಪಕ ಊಟ ಒದಗಿಸಬೇಕು. ಆರೋಗ್ಯ ಸೌಲಭ್ಯ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಈಗಾಗಲೇ ಸೌಲಭ್ಯ ಒದಗಿಸಲಾಗಿದೆ. ವೈದ್ಯಕೀಯ ತಂಡ ಸದಾ ಲಭ್ಯವಿರುವಂತೆ ಇರಬೇಕು. ಕಲಾಪ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಪರಿಷತ್ತಿನ ವತಿಯಿಂದ ಪ್ರತಿವರ್ಷದಂತೆ ಪಾಸ್ ನೀಡಲಾಗುತ್ತದೆ ಎಂದು ಮಲ್ಕಾಪುರೆ ಹೇಳಿದರು.
20ಕ್ಕಿಂತ ಅಧಿಕ ಪೊಲೀಸ್ ಚೆಕ್ಪೋಸ್ಟ್: ಅಧಿವೇಶನದ ಹಿನ್ನೆಲೆಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದರು.