ಬೆಂಗಳೂರು :ಕಾಂಗ್ರೆಸ್ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೊರ ರಾಜ್ಯದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ನಿಯುಕ್ತಿ ಮಾಡಿದ್ದು ಹಾಗು ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ ಕಲಾಪವನ್ನು ನಡೆಸಲಾಯಿತು. ಈ ವೇಳೆ 5 ಪ್ರಮುಖ ವಿಧೇಯಕಗಳನ್ನು ಪ್ರತಿಪಕ್ಷ ಸದಸ್ಯರ ಗೈರಿನಲ್ಲಿ ಅಂಗೀಕರಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಸದಸ್ಯರ ಜೊತೆ ಮಾತನಾಡಿ ಕಲಾಪದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಅವರು ಸಮಯ ಕೋರಿದರು ನಂತರ ಬರಲ್ಲ ಸದನ ನಡೆಸಿ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ನಂತರ ಜೆಡಿಎಸ್ ಸದಸ್ಯರನ್ನೂ ಸಂಪರ್ಕಿಸಿದೆ. ಅವರೂ ಕೂಡ ಸದನ ನಡೆಸಿ ನಾವು ಸಭೆ ಮಾಡುತ್ತಿದ್ದೇವೆ ನಂತರ ನಾವು ನಮ್ಮ ನಿರ್ಧಾರ ತಿಳಿಸುತ್ತೇವೆ. ಎರಡೂ ಪಕ್ಷದ ಸದಸ್ಯರಿಗಾಗಿ ಸಮಯ ನೀಡಿದರೂ ಅವರು ಬರಲಿಲ್ಲ, ಹಾಗಾಗಿ ಅವರ ಗೈರಿನಲ್ಲೇ ಸದನ ನಡೆಸುತ್ತೇನೆ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಅಧಿವೇಶನ ನಡೆಯುವಾಗ ಅಧಿವೇಶನ ಬಹಿಷ್ಕಾರ ಮಾಡುವುದು ಸರಿಯಲ್ಲ. 5 ವಿದೇಯಕ ಮಂಡನೆಯಾಗಿದೆ. ಬಿಲ್ ಮೇಲೆ ಚರ್ಚೆ ನಡೆಯಬೇಕು. ಬಜೆಟ್ ಮೇಲೂ ಚರ್ಚೆ ಮಾಡಬೇಕಾಗಿದೆ. ಒಂದೆರಡು ದಿನ ಸದನ ನಡೆಸಲಿಲ್ಲ ಎಂದರೆ ಸಾರ್ವಜನಿಕರ ಹಣ ನಷ್ಟವಾಗಲಿದೆ. ನಾಡಿನ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡಿ ನಾಡಿನ ಅಭಿವೃದ್ಧಿಗೆ ನಿರ್ಣಯ ಕೈಗೊಳ್ಳಲು ಸರ್ಕಾರದ ಕಣ್ಣು ತೆರೆಸಲು ಕಲಾಪ ನಡೆಸಬೇಕು. ಹಾಗಾಗಿ ಪ್ರತಿಪಕ್ಷ ಸದಸ್ಯರು ಪಾಲ್ಗೊಳ್ಳಿ ಎಂದು ಮನವಿ ಮಾಡಿ, ಕಲಾಪ ಮುಂದುವರೆಸಲು ಮನವಿ ನೀಡಿದರು.
ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕ : ನಂತರ ಶಾಸಕ ರಚನೆ ಕಲಾಪವನ್ನು ಸಭಾಪತಿಗಳು ಕೈಗೆತ್ತಿಕೊಂಡರು. ಕಾನೂನು ಸಚಿವ ಹೆಚ್ ಕೆ ಪಾಟೀಲ್ ಸಿವಿಲ್ ಪ್ರಕ್ರಿಯಾ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು. ವಿಧೇಯಕದ ಮೇಲೆ ಮಾತನಾಡಿದ ಹೆಚ್.ವಿಶ್ವನಾಥ್, ಎಷ್ಟೋ ಜನರಿಗೆ ನ್ಯಾಯವಾದಿಗಳಿಗೆ ಹಣ ಕೊಡಲು ಸಾದಸ್ಯವಾಗದೆ ಕೇಸ್ ಬಿಟ್ಟ ಉದಾಹರಣೆಗಳು ಇವೆ. ಇಂತಹದ್ದರಲ್ಲಿ ಬಡವರಿಗೆ ನ್ಯಾಯ ಕೊಡುವ ತಿದ್ದುಪಡಿ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ ಎಂದರು.
ಮತ್ತೆ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ತಾತ ಆರಂಭಿಸಿದ ಕೇಸ್ ಅನ್ನು ಮೊಮ್ಮಕ್ಕಳು ಮುಂದುವರೆಸಿಕೊಂಡು ಹೋಗುವ ಉದಾಹರಣೆ ಇವೆ. ಕೇಸ್ ಇತ್ಯರ್ಥ ಬಹಳ ವಿಳಂಬವಾಗುತ್ತಿದ್ದು, ಹಣ ವ್ಯಯವಾಗುತ್ತಿದೆ. ಇದನ್ನು ಮನಗಂಡು ಬಡವರಿಗೆ ತ್ವರಿತ ನ್ಯಾಯ ಕೊಡುವ ಸರ್ಕಾರದ ಚಿಂತನೆ ಉತ್ತಮವಾಗಿದೆ. ಸರ್ಕಾರಿ ವಕೀಲರಿದ್ದರೂ ಸರ್ಕಾರದ ಪರ ತೀರ್ಪು ಬರುತ್ತಿಲ್ಲ. ಇನ್ನು ಬಡವರ ಪರ ವಾದ ಮಾಡುವ ವಕೀಲರು ಎಷ್ಟು ಪ್ರಾಮಾಣಿಕವಾಗಿ ವಾದ ಮಾಡಲಿದ್ದೇರೆ ಎನ್ನುವುದು ಮುಖ್ಯವಾಗಲಿದೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿ ವಿಧೇಯಕವನ್ನು ಬೆಂಬಲಿಸಿದರು. ಕಾಂಗ್ರೆಸ್ ಸದಸ್ಯರಾದ ಯುಬಿ ವೆಂಕಟೇಶ್, ನಜೀರ್ ಅಹಮದ್, ಜಗದೀಶ್ ಶೆಟ್ಟರ್ ವಿಧೇಯಕ ಸ್ವಾಗತಿಸಿ ಮಾತನಾಡಿ ಕೆಲ ಸಲಹೆ ನೀಡಿದರು.
ಸದಸ್ಯರ ಅಭಿಪ್ರಾಯದ ನಂತರ ಮಾತನಾಡಿದ ಹೆಚ್.ಕೆ ಪಾಟೀಲ್, ಬಡವರಿಗೆ ಅನುಕೂಲ ಮಾಡಿಕೊಡಬೇಕ. ಆಸ್ತಿ, ಬದುಕಿನ ಹಕ್ಕು ಉಳಿಸಿಕೊಳ್ಳಲು, ನ್ಯಾಯ ಪಡೆಯಲು ಈ ಬಿಲ್ ಸಹಕಾರಿಯಾಗಲಿದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಯಾರಿದ್ದಾರೋ ಅವರೆಲ್ಲರಿಗೂ ನೀವು ಮಾಡಲೇಬೇಕು ಎನ್ನುವ ನಿರ್ದೇಶನ ಕೊಡಲಿದೆ. ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕಳೆದ 10 ವರ್ಷ ಯಾವ ಮಟ್ಟಕ್ಕೆ ಏರಬೇಕಾಗಿತ್ತೋ ಅಲ್ಲಿಗೆ ಏರಿಲ್ಲ. ಕಾನೂನು ವಿವಿ ಸ್ಥಾಪನೆಗೆ ನನ್ನ ಜೊತೆ ಬಸವರಾಜ ಹೊರಟ್ಟಿ ಅವರ ಪಾಲೂ ಇದ. ನನ್ನ ನಂತರ ಕಾನೂನು ಸಚಿವರಾಗಿ ಹೊರಟ್ಟಿ ಕಾನೂನು ವಿವಿ ಸ್ಥಾಪಿಸಿದರು.
ಆದರೆ ನಂತರ ನಾವು ಅಧಿಕಾರದಲ್ಲಿ ಇರಲಿಲ್ಲ. ಹೊರಟ್ಟಿ ಅವರೂ ಅಧಿಕಾರದಲ್ಲಿ ಇರಲಿಲ್ಲ. ಅಧಿಕಾರದಲ್ಲಿ ಇದ್ದವರು ಅಗತ್ಯ ನೆರವು ಕಾನೂನು ವಿವಿಗೆ ನೀಡಿಲ್ಲ. ಮುಂದಿನ ಮೂರು ವರ್ಷದಲ್ಲಿ ಕಾನೂನು ವಿವಿಯ ಎಲ್ಲ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಿತು.
ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕ : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ವಿಧೇಯಕವನ್ನು ಹೆಚ್.ಕೆ ಪಾಟೀಲ್ ಸದನದಲ್ಲಿ ಮಂಡಿಸಿದರು. ವಿಧೇಯಕ ಬೆಂಬಲಿಸಿ ಮಾತನಾಡಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಹಿನ್ನಡೆ ಮಾಡುವ ಅಧಿಕಾರಿಗಳಿಗೆ ಶಿಕ್ಷೆ ಮತ್ತು ದಂಡ ವಿಧಿಸಬೇಕು. ಪ್ರಕರಣಕ್ಕೆ ನೇಮಕವಾಗುವ ಲಾಯರ್ ಗಳನ್ನೂ ಹೊಣೆಗಾರಿಕೆ ಮಾಡಬೇಕು. ಸರ್ಕಾರ ನೀಡುವ ಮಾಹಿತಿಯನ್ನು ಕೋರ್ಟ್ಗೆ ತಲುಪಿಸೋದೆ ಇಲ್ಲ. ಅಂತಹ ಲಾಯರ್ ಕೂಡ ಇದಾರೆ. ಇದರಿಂದ ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟ ಆಗುತ್ತಿದೆ. ಈ ವಿಧೇಯಕದಿಂದ ಅಧಿಕಾರಿಗಳು, ಲಾಯರ್ಗೆ ಕಡಿವಾಣ ಹಾಕುವ ಕೆಲಸ ಆಗಲಿದೆ ಎಂದರು.
ಬಿಜೆಪಿ ಸದಸ್ಯ ವಿಶ್ವನಾಥ್ ಮಾತನಾಡಿ, ಸರ್ಕಾರಿ ವ್ಯಾಜ್ಯ ನಿರ್ವಹಣಾ ವಿಧೇಯಕವನ್ನ ಸ್ವಾಗತಿಸುತ್ತೇನೆ. ಸರ್ಕಾರಿ ವಕೀಲರನ್ನೇ ಎದುರುವಾದಿ ಲಾಯರ್ ಬುಕ್ ಮಾಡುತ್ತಾನೆ. ಸಾಕ್ಯಗಳ ಕೊರತೆಯಿಂದಲೇ ಪ್ರಕರಣ ಸೋಲುತ್ತಿದ್ದೇವೆ. ಹಿಂದೆ ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತಿತ್ತು. ಪಾಕಿಸ್ತಾನದಲ್ಲಿ ಚೆಕ್ ಬೌನ್ಸ್ ಕೇಸ್ ಒಂದೇ ಹಿಯರಿಂಗ್ನಲ್ಲಿ ಮುಗಿಯುತ್ತೆ ಅಂತಹ ಕಾನೂನು ಬೇಕು. ಬಿಜೆಪಿ ಸದಸ್ಯರು ಸದನದಲ್ಲಿ ಇರಬೇಕಿತ್ತು. ಎಲ್ಲರೂ ಇಷ್ಟು ಬುದ್ಧಿವಂತರಾಗಿದ್ದಾರಲ್ಲ ಎಂದು ಧರಣಿಗೆ ಕುಳಿತಿದ್ದಾರೆ. ಸದನದಲ್ಲಿ ಇರಬೇಕು. ಇಂತಹ ಬಿಲ್ ಬಗ್ಗೆ ಚರ್ಚೆ ಮಾಡಬೇಕು ಎಂದು ಬಿಜೆಪಿ ಸದಸ್ಯರಿಗೆ ತಿವಿದರು.