ಬೆಂಗಳೂರು:ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ 45 ದಿನಗಳ ಒಳಗೇ ಜಾರಿ ಮಾಡಿದ್ದೇವೆ. ಇದನ್ನು ಪ್ರತಿಯೊಬ್ಬ ಮತದಾರರಿಗೆ ಅರ್ಥ ಮಾಡಿಸಿ, ವಿಧಾನಸಭೆ ಅಧಿವೇಶನದಲ್ಲಿ ಎದೆ ಎತ್ತಿ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರಿಗೆ ಹುರಿದುಂಬಿಸಿದರು.
ಸಂಪುಟ ಸಭೆಗೂ ಮುನ್ನ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದರು. ನಾವು 2013 ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಸರ್ಕಾರ ನಡೆಸಿದ ಐದು ವರ್ಷಗಳಲ್ಲಿ ಈಡೇರಿಸಿ "ನುಡಿದಂತೆ ನಡೆದ ಸರ್ಕಾರ" ಎನ್ನುವ ಹೆಗ್ಗಳಿಕೆ ಗಳಿಸಿದ್ದೇವೆ. ಬಿಜೆಪಿ 2018 ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 608 ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಲೇ ಇಲ್ಲ. ಹೀಗಾಗಿ ಬಿಜೆಪಿಗೆ ನಮ್ಮ ಕಡೆ ಬೊಟ್ಟು ಮಾಡುವ ನೈತಿಕತೆಯೇ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಸುಳ್ಳುಗಳಿಗೆ ಅವರು ಜೋತು ಬೀಳುತ್ತಾರೆ. ನೀವು ಸರಿಯಾಗಿ ಖಚಿತವಾದ ಧ್ವನಿಯಲ್ಲಿ ಸತ್ಯವನ್ನು ಮಾತನಾಡಿ ಎಂದು ತಿಳಿಸಿದರು.
2023ರ ಚುನಾವಣೆ ವೇಳೆ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನೂ ನಾವು ಈಡೇರಿಸಲು ಶುರು ಮಾಡಿದ್ದೇವೆ. ಕೋಟಿಗಟ್ಟಲೆ ಕನ್ನಡಿಗರು ಈಗಾಗಲೇ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೂ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕು. ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರು ತಲೆ ಎತ್ತಿ ಹೆಮ್ಮೆ ಪಡುವ ಸಂದರ್ಭವನ್ನು ನಮ್ಮ ಸರ್ಕಾರ ಸೃಷ್ಟಿಸಿದೆ ಎಂದರು.
16ನೇ ವಿಧಾನಸಭೆಯ ಪ್ರಥಮ ಬಜೆಟ್ ಮಂಡನೆ ಆರಂಭವಾಗಿದ್ದು, ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಎಲ್ಲಾ ಸಚಿವರು ಮತ್ತು ಶಾಸಕರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಶಾಸಕಾಂಗ ನಾಯಕರು ಶಾಸಕರಿಂದ ಚುನಾವಣಾ ವೆಚ್ಚದ ಮಾಹಿತಿ ಪಡೆದರು. ಎಐಸಿಸಿಗೆ ಚುನಾವಣಾ ವೆಚ್ಚದ ಮಾಹಿತಿ ನೀಡಬೇಕಿದೆ. ಆದ್ದರಿಂದ ಪ್ರತಿಯೊಬ್ಬ ಶಾಸಕರು ತಮ್ಮ ಚುನಾವಣಾ ವೆಚ್ಚದ ಮಾಹಿತಿ ನೀಡುವಂತೆ ಸಿಎಲ್ಪಿ ಸಭೆಯಲ್ಲಿ ಸೂಚನೆಕೊಟ್ಟರು. 15 ದಿನದ ಒಳಗಾಗಿ ಚುನಾವಣಾ ವೆಚ್ಚದ ಮಾಹಿತಿ ನೀಡುವಂತೆ ಎಲ್ಲ ಶಾಸಕರಿಗೆ ತಿಳಿಸಿದರು.
ಬಳಿಕ, ನೂತನವಾಗಿ ವಿಧಾನ ಪರಿಷತ್ಗೆ ಆಯ್ಕೆಯಾದ ಜಗದೀಶ್ ಶೆಟ್ಟರ್, ಬೋಸ್ ರಾಜ್ ಮತ್ತು ತಿಪ್ಪಣ್ಣ ಕಮಕನೂರು ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವಾಗತಿಸಿ ಅಭಿನಂದಿಸಿದರು. ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಅಯ್ಕೆಯಾಗಿದ್ದು, ಅತ್ಯುತ್ತಮ ಕಾರ್ಯನಿರ್ವಹಿಸುವಂತೆ ಇದೇ ವೇಳೆ ಪಕ್ಷದ ಹಿರಿಯರು ಸೂಚನೆಯಿತ್ತರು.