ಬೆಂಗಳೂರು: ವಿಧಾನ ಪರಿಷತ್ ಕಲಾಪವನ್ನು ಹಠಾತ್ ಮುಂದೂಡಿರುವುದು ಕೆಟ್ಟ ಸಂಪ್ರದಾಯ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಧಾನಸಭೆಯನ್ನು ನಿನ್ನೆ ಅನಿರ್ದಿಷ್ಟ ಅವಧಿಗೆ ಮುಂದೂಡಲು ತೀರ್ಮಾನ ಮಾಡಿದ್ದೆವು. ಆದರೆ, ವಿಧಾನಪರಿಷತ್ ಮುಂದೂಡಲು ತೀರ್ಮಾನ ಮಾಡಿರಲಿಲ್ಲ. ಪರಿಷತ್ ಅನ್ನು ಮಂಗಳವಾರದವರೆಗೂ ನಡೆಸಲು ತೀರ್ಮಾನ ಮಾಡಿದ್ದೆವು ಎಂದರು.
ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ; ಶೇ.90ಕ್ಕೂ ಹೆಚ್ಚು ಕಾರ್ಯಕಲಾಪ ಪೂರ್ಣ : ಸ್ಪೀಕರ್ ಕಾಗೇರಿ
ಪ್ರತಿ ಭಾರಿ ಸಭೆಯಲ್ಲಿ ಮಂಡನೆಯಾದ ವಿಧೇಯಕಗಳು ವಿಧಾನಪರಿಷತ್ತಿನಲ್ಲಿ ಬಿದ್ದು ಹೋಗುತ್ತಿದ್ದವು. ನಿನ್ನೆ ಅವಿಶ್ವಾಸ ನಿರ್ಣಯ ಮಂಡಿಸಲು ದಿನ ನಿಗದಿ ಮಾಡಬೇಕಿತ್ತು. ಆದರೆ ಸಭಾಪತಿ ಅವರು ಹಠಾತ್ತಾಗಿ ಕಲಾಪ ಮುಂದೂಡಿದ್ದಾರೆ. ಇದೊಂದು ಕೆಟ್ಟ ಸಂಪ್ರದಾಯ, ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಸಭಾಪತಿ ಅವರಿಗೆ ನಾವು ಮೊದಲು ಪತ್ರ ಬರೆಯುತ್ತೇವೆ. ಮತ್ತೆ ಮಂಗಳವಾರದವರೆಗೆ ಕಲಾಪ ನಡೆಸಲು ವಿನಂತಿ ಮಾಡುತ್ತೇವೆ. ರಾಜ್ಯಪಾಲರ ಗಮನಕ್ಕೂ ತರುತ್ತೇವೆ. ಈಗಾಗಲೇ ಡಿಸಿಎಂ ಲಕ್ಷ್ಮಣ ಸವದಿ, ಮಹಾಂತೇಶ ಕವಟಗಿಮಠ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ ಎಂದರು.