ಕರ್ನಾಟಕ

karnataka

ETV Bharat / state

Legislative council Session: ಕಂದಾಯ ಭೂಮಿ ಒತ್ತುವರಿ ತೆರವಿಗೆ ಕ್ರಮ ಹಾಗು ಬಿಗಿ ವ್ಯವಸ್ಥೆ ಮಾಡಲಿದ್ದೇವೆ.. ಸಚಿವ ಕೃಷ್ಣ ಬೈರೇಗೌಡ

ಕಂದಾಯ ಭೂಮಿ ಒತ್ತುವರಿಯಿಂದ ಹೊರಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

By

Published : Jul 5, 2023, 6:20 PM IST

ಬೆಂಗಳೂರು :ರಾಜ್ಯದಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಮತ್ತು ಕಬಳಿಕೆಯಾಗಿರುವ ಕಂದಾಯ ಭೂಮಿಯನ್ನು ವಾಪಸ್ ಪಡೆದುಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಕ್ರಮಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಿದ್ದು, ವ್ಯವಸ್ಥೆ ಬಿಗಿ ಮಾಡಲಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿಎ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಭೂಮಿ ಕಬಳಿಕೆದಾರರು, ಒತ್ತುವರಿದಾರರು ಯಾವ ಸರ್ಕಾರ ಬಂದರೂ ಹೋದರೂ ಅಡ್ಡಿಯಿಲ್ಲದಂತಿದ್ದಾರೆ. ಅಧಿಕಾರಿಗಳ ಸಹಕಾರವಿಲ್ಲದೆ ಈ ರೀತಿ ಆಕ್ರಮ ನಡೆಯಲ್ಲ. ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದರೇ ನಿಯಂತ್ರಣ ಮಾಡಲು ಸಾಧ್ಯ. ಆದರೆ ಇದಾಗುತ್ತಿಲ್ಲ ಎಂದರು.

ಕಳೆದ ಸರ್ಕಾರ ಇದ್ದಾಗ ರೈತರು ಸಾಗುವಳಿ ಮಾಡುತ್ತಿರುವ ಜಾಗ ಕಂದಾಯ ಭೂಮಿ ಒತ್ತುವರಿಯಿಂದ ಹೊರಗೆ ತರುವ ಕೆಲಸ ಮಾಡಿದೆ. ಉಳಿದ ಒತ್ತುವರಿ ಜಾಗ ವಾಪಸ್ ಪಡೆಯಲು ನಾವು ಕ್ರಮ ವಹಿಸಲಿದ್ದೇವೆ. ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುತ್ತಿದ್ದೇವೆ. ಈ ಸಂಬಂಧ ಕೆ. ಆರ್ ಪುರ ತಹಶೀಲ್ದಾರ್ ಅಮಾನತ್ತು ಮಾಡಿದ್ದೇವೆ. ಈಗಾಗಲೇ ಅಧಿಕಾರಿಗಳಿಗೆ ಪತ್ರ ಕಳಿಸಿದ್ದು, ಒತ್ತವರಿ ಕುರಿತು ವರದಿಗೆ ಸೂಚನೆ ನೀಡಿದ್ದೇನೆ. ಇಂತಹ ಆಕ್ರಮಗಳು ನಡೆಯದಂತೆ ಬಿಗಿ ವ್ಯವಸ್ಥೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸರ್ಕಾರ ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆಸಲಿದೆ ಎಂದರು.

ಪಶುಸಂಗೋಪಾನಾ ಇಲಾಖೆ ಖಾಲಿ ಹುದ್ದೆ ಭರ್ತಿ :ಈ ಸಂದರ್ಭದಲ್ಲಿಪಶುಸಂಗೋಪಾನಾ ಇಲಾಖೆಯಿಂದ ಬೇರೆ ಇಲಾಖೆಗೆ ತೆರಳಿರುವ ಅಧಿಕಾರಿಗಳನ್ನು ಮರಳಿ ವಾಪಸ್ ಕರೆಸಿಕೊಳ್ಳಲಾಗುತ್ತದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ.

ಕಲಾಪದಲ್ಲಿ ಬಿಜೆಪಿ ಸದಸ್ಯ ಸಂಕನೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಸಂಗೋಪನೆ ಇಲಾಖೆಯಿಂದ ಬೇರೆ ಇಲಾಖೆಗೆ ಹೋದವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ. 1261 ಪಶುವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು, ಭರ್ತಿಗೆ ಕ್ರಮ ವಹಿಸಲಿದ್ದೇವೆ. ಕೆಪಿಎಸ್​ಸಿ ಮೂಲಕ ನೇಮಕ ಮಾಡಿಕೊಳ್ಳಲಿದ್ದೇವೆ. ಎಲ್ಲಿ ಕೊರತೆ ಇದೆಯೋ ಅಲ್ಲಿಗೆ ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚುವರಿ ಇರುವ ಕಡೆಯಿಂದ ಬೇರೆಡೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಡಲ ಕೊರೆತ ತಡೆ ಗ್ಯಾರಂಟಿಯಲ್ಲಿ ಕೊಚ್ಚಿ ಹೋಗಲ್ಲ :ಬಳಿಕ ಕಡಲ ಕೊರೆತ ತಡೆಗೆ ಅಗತ್ಯ ಕ್ರಮ ವಹಿಸಲು ಸರ್ಕಾರ ಬದ್ಧವಾಗಿದೆ. ಕಡಲ ಕೊರೆತ ತಡೆ ಸರ್ಕಾರದ ಗ್ಯಾರಂಟಿಯಲ್ಲಿ ಕೊಚ್ಚಿ ಹೋಗಲ್ಲ ಎಂದು ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದ್ದಾರೆ. ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್​ ಪ್ರಶ್ನೆಗೆ ಉತ್ತರಿಸಿದ ಮಂಕಾಳ ವೈದ್ಯ, 320 ಕಿ.ಮೀ. ಕಾರವಾರ ಮತ್ತು ಮಂಗಳೂರು ನಡುವೆ ಸಮುದ್ರ ದಂಡೆ ಇದೆ. ಇದರಲ್ಲಿ 100 ಕಿ.ಮೀ. ಕಡಲ ಕೊರೆತ ತಡೆಗೆ ಕ್ರಮ ಆಗಿದೆ. ಇನ್ನು 220 ಕಿ.ಮೀ ಬಾಕಿ ಇದ್ದು, ಮುಂದೆ ಬರುವ ಅನುದಾನದಲ್ಲಿ ಅದನ್ನೂ ಮಾಡಿ ಮುಗಿಸುತ್ತೇವೆ.

ಹಂತ ಹಂತವಾಗಿ ಕಡಲ ಕೊರೆತ ನಿಯಂತ್ರಣ ಮಾಡಲಿದ್ದು, ಗ್ಯಾರಂಟಿಯಲ್ಲಿ ಇದು ಕೊಚ್ಚಿ ಹೋಗಲ್ಲ. ಈ ಹಿಂದೆ ಸರ್ಕಾರ ಭರವಸೆ ನೀಡಿದೆ. ಅದರಂತೆ ಮಾಡಲಿದೆ. ಕಡಲ ಕೊರೆತ ತಡೆಗೆ ಬೇಕಾದ ಕ್ರಮ ವಹಿಸಲಿದ್ದೇವೆ. ಅದಷ್ಟು ಬೇಗ 220 ಕಿ.ಮೀ. ವರೆಗೂ ಸ್ಥಳ ಪರಿಶೀಲನೆ ಮಾಡಿ ಕ್ರಮ ವಹಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸಭಾಪತಿ ಪ್ಯಾನಲ್ :ಸಭಾಪತಿ ಮತ್ತು ಉಪ ಸಭಾಪತಿಗಳು ಸದನದಲ್ಲಿ ಉಪಸ್ಥಿತರಿಲ್ಲದ ವೇಳೆ ಸಭಾಪತಿ ಪೀಠದಲ್ಲಿ ಕಾರ್ಯ ನಿರ್ವಹಿಸಲು ಪ್ಯಾನಲ್ ರಚಿಸಲಾಗಿದೆ. ಶಶಿಲ್ ನಮೋಶಿ, ತೇಜಸ್ವಿನಿಗೌಡ, ಮರಿತಿಬ್ಬೇಗೌಡ, ಮಂಜುನಾಥ ಭಂಡಾರಿ ಅವರು ಸಭಾಪತಿ ಮತ್ತು ಉಪ ಸಭಾಪತಿ ಇಲ್ಲದ ವೇಳೆ ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.

ಇದನ್ನೂ ಓದಿ :ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಪಿಡಿಒಗಳ ಹುದ್ದೆಗೆ ಶೀಘ್ರ ನೇಮಕ: ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details