ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಖುರ್ಚಿ ಉಳಿಸಿಕೊಳ್ಳುವ ಸರ್ಕಸ್ನಲ್ಲಿ ರಾಜ್ಯದ ಅಭಿವೃದ್ಧಿ ಮರೆತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿರುವ ಅವರು, ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗ್ತಾನೇ ಇದೆ. ಆಡಳಿತ ಯಂತ್ರ ಹಾಗೂ ಸಂಪುಟ ಸಹದ್ಯೋಗಿಗಳ ವಿರುದ್ಧ ಬಿಜೆಪಿ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಶಾಸಕರು ಅಳಲು ತೋಡಿಕೊಂಡಿದ್ದಾರೆ ಎಂದಿದ್ದಾರೆ.
ಕೆಲವು ಸಚಿವರು ನಮ್ಮ ಕೆಲಸ ಮಾಡಿಕೊಡುತ್ತಿಲ್ಲ, ಕಡತಗಳನ್ನೂ ತಡೆ ಹಿಡಿದಿದ್ದಾರೆ. ಅವರನ್ನು ಕೇಳಲು ಹೋದರೆ ‘ನಿಮ್ಮ ಮುಖ್ಯಮಂತ್ರಿ ಜತೆಗೇ ಮಾತನಾಡ್ರಿ‘ ಎನ್ನುತ್ತಾರೆ ಎಂದು ಬಿಜೆಪಿಯ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಶಾಸಕರು ಆಕ್ರೋಶದಿಂದ ಮಾತನಾಡಿದರೂ ಸಂಪುಟ ಸಹದ್ಯೋಗಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪರವರು ಬಿಟ್ಟುಕೊಟ್ಟಿಲ್ಲ. ಸರ್ಕಾರ ಮತ್ತು ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಮುಖ್ಯಮಂತ್ರಿ ಬಿಎಸ್ವೈ ಯತ್ನಿಸುತ್ತಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳೋದರಲ್ಲೇ ಅವರು ಸರ್ಕಸ್ ಮಾಡುತ್ತಿದ್ದಾರೆ. ಆಡಳಿತ ಯಂತ್ರದ ಕಿತ್ತಾಟದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ ಎಂದಿದ್ದಾರೆ.
ಓದಿ : ಯುವತಿ ಆಡಿಯೋದಲ್ಲಿ ಡಿಕೆಶಿ ಹೆಸರು ಪ್ರಸ್ತಾಪ; ಸಿದ್ದರಾಮಯ್ಯ ತಡರಾತ್ರಿ ಸಭೆ, ಚರ್ಚೆ