ಬೆಂಗಳೂರು:ವಿಧಾನ ಪರಿಷತ್ಗೆ ನಾಮ ನಿರ್ದೇಶಿತ ಸದಸ್ಯರಾದ ಪಿ ಆರ್ ರಮೇಶ್ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ಅವರು ಬುಧವಾರ ನಿವೃತ್ತಿಯಾಗಿದ್ದಾರೆ. ವಿಧಾನ ಪರಿಷತ್ನ ಅವರ ಸದಸ್ಯತ್ವ ಅವಧಿ ಇಂದಿಗೆ ಪೂರ್ಣಗೊಂಡಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬರುವ ಕಾಂಗ್ರೆಸ್ ಸರ್ಕಾರ ಎರಡು ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಬಹುದು. ಇನ್ನು ಕಾಂಗ್ರೆಸ್ನ ಮತ್ತೊಬ್ಬ ಸದಸ್ಯ ಸಿ ಎಂ ಲಿಂಗಪ್ಪ ಅವರು ಜೂನ್ ನಲ್ಲಿ ನಿವೃತ್ತರಾಗಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣಕ್ಕೆ ಬಿಜೆಪಿ ಟಿಕೆಟ್ ವಂಚಿತ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್, ಪುಟ್ಟಣ್ಣ, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರು, ಆರ್. ಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು ನಾಮ ನಿರ್ದೇಶಿತ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅವರು ಸಹ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ.
ವಿಧಾನ ಪರಿಷತ್ನ 75 ಸದಸ್ಯರ ಸ್ಥಾನಗಳ ಪೈಕಿ ಸದ್ಯಕ್ಕೆ ಸದ್ಯಕ್ಕೆ ಬಿಜೆಪಿ 34, ಕಾಂಗ್ರೆಸ್ 26, ಜೆಡಿಎಸ್ 8 ಸದಸ್ಯರ ಬಲಹೊಂದಿದೆ. ಸಭಾಪತಿ, ಪಕ್ಷೇತರ ತಲಾ ಒಂದು, ಐದು ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಕಾರಣ ತೆರವಾಗಿರುವ ಮೂರು, ಅವಧಿ ಮುಗಿದ ಮತ್ತಿಬ್ಬರ ಸ್ಥಾನಗಳನ್ನು ತುಂಬುವ ಅವಕಾಶ ಕಾಂಗ್ರೆಸ್ ಪಡೆದುಕೊಂಡಿದೆ. ಅಲ್ಲಿಗೆ ಕಾಂಗ್ರೆಸ್ ಬಲ 29 ಕ್ಕೆ ಏರಿಕೆ ಆಗಲಿದೆ.
ಸದಸ್ಯರ ರಾಜೀನಾಮೆಯಿಂದ ವಿಧಾನ ಪರಿಷತ್ತಿನ ಐದು ಸ್ಥಾನ ಖಾಲಿ ಇದ್ದು, ಆ ಸ್ಥಾನಗಳಿಗೂ ಉಪ ಚುನಾವಣೆ ಘೋಷಣೆಯಾಗಬೇಕಿದೆ.. ಹೀಗಾಗಿ ಒಂದು ಶಿಕ್ಷಕರ ಕ್ಷೇತ್ರ, ಒಂದು ಪದವೀಧರ ಕ್ಷೇತ್ರ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಗಳು ಖಾಲಿ ಇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗುವ ಸಾಧ್ಯತೆ ಇದ್ದು, ಬಿಜೆಪಿ ಸ್ಥಾನಗಳು ಕುಸಿತದಿಂದ ಸಭಾಪತಿ ಹಾಗೂ ಉಪ ಸಭಾಪತಿ ಸ್ಥಾನಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ.