ಬೆಂಗಳೂರು:ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಹತ್ವದ ಸಭೆ ನಡೆಸಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಕಟೀಲ್ ಜೊತೆ ಸಭೆ ನಡೆಸಿದರು. 20 ಜಿಲ್ಲೆಗಳ ಸ್ಥಳೀಯ ಸಂಸ್ಥೆಯಿಂದ 25 ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಿದರು. ಕೋರ್ ಕಮಿಟಿ ಸಭೆಯ ನಂತರ ಜಿಲ್ಲಾ ಸಮಿತಿಗಳ ಜೊತೆ ವರ್ಚುವಲ್ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದು ಅದರ ಬಗ್ಗೆ ಮಾತುಕತೆ ನಡೆಸಲಾಯಿತು.
25 ಸ್ಥಾನಗಳಲ್ಲಿ 20 ರಲ್ಲಿ ಸ್ಪರ್ಧೆ ಮಾಡಲು ಬಿಜೆಪಿ ಚಿಂತನೆ ನಡೆಸಿದ್ದು, ಸ್ವ ಸದಸ್ಯ ಇರುವ ಕಡೆ ಒಬ್ಬರನ್ನೇ ನಿಲ್ಲಿಸುವ ಕುರಿತು ಚರ್ಚೆ ನಡೆಯಿತು. ಹಾಲಿ ಇರುವ ಸದಸ್ಯರಲ್ಲಿ ಮಡಿಕೇರಿ ಹೊರತುಪಡಿಸಿ ಇತರ ಸದಸ್ಯರಿಗೆ ಟಿಕೆಟ್ ಖಚಿತವಾಗಿದ್ದು, ಐದಾರು ಜಿಲ್ಲೆಗಳಲ್ಲಿ ಗೊಂದಲವಿದೆ ಅದರ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಹಾಲಿ ಕ್ಷೇತ್ರಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ತಲಾ ಎರಡು ಅಥವಾ ಮೂರು ಹೆಸರುಗಳನ್ನು ಕಳಿಸುವ ಕುರಿತು ಮಾತುಕತೆ ನಡೆಯಿತು.
ಕುತೂಹಲ ಮೂಡಿಸಿದ ಬೆಲ್ಲದ್:
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಶಾಸಕ ಅರವಿಂದ ಬೆಲ್ಲದ್ ಆಗಮಿಸಿ ಕುತೂಹಲ ಮೂಡಿಸಿದ್ದಾರೆ. ಧಾರವಾಡ ಸ್ವ ಸದಸ್ಯತ್ವ ಇರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಬೆಲ್ಲದ್ ಕೂಡ ಮಾತುಕತೆ ನಡೆಸಬಹುದು ಎನ್ನಲಾಗಿದೆ.