ಬೆಂಗಳೂರು: ಶಿರಹಟ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಬಿ ಫಾರಂ ನೀಡಲು ಕಾನೂನು ತೊಡಕು ಎದುರಾಗಿದೆ. ಸರ್ಕಾರಿ ವೈದ್ಯ ಆಗಿರುವ ಡಾ.ಚಂದ್ರು ಲಮಾಣಿ ಮೇಲೆ 2019 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ದಾಳಿ ಆಗಿತ್ತು. ಇಲಾಖಾ ಹಂತದಲ್ಲಿ ಚಂದ್ರು ವಿರುದ್ಧ ತನಿಖೆ ಬಾಕಿ ಇದೆ. ತಾಂತ್ರಿಕ ಕಾರಣದಿಂದ ಇನ್ನೂ ರಾಜೀನಾಮೆ ಅಂಗೀಕಾರ ಆಗಿಲ್ಲ. ಈ ಕಾರಣಕ್ಕೆ ಡಾ. ಚಂದ್ರು ಲಮಾಣಿಗೆ ಬಿ ಫಾರಂ ನೀಡಲು ಸಾಧ್ಯವಾಗುತ್ತಿಲ್ಲ.
ಇತ್ತ ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ವಿರುದ್ಧ ಹಾಲಿ ಶಾಸಕ ರಾಮಪ್ಪ ಲಮಾಣಿ ದೂರು ನೀಡಿದ್ದಾರೆ. ಚಂದ್ರು ಲಮಾಣಿ ವಿರುದ್ಧ ಸಾಕಷ್ಟು ಆರೋಪಗಳಿವೆ. ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಕೊಡುವಂತೆ ಶಾಸಕ ರಾಮಪ್ಪ ಲಮಾಣಿ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಕೊಟ್ಟಿದ್ದಾರೆ. ಇಂದು ಬಿಜೆಪಿ ಕಚೇರಿಗೆ ಆಗಮಿಸಿ ಈ ದೂರು ಕೊಟ್ಟಿದ್ದಾರೆ.