ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ: ವಕೀಲರಿಂದ ಲೀಗಲ್ ನೋಟಿಸ್ - ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ

Legal Notice to BJP: ರಾಜ್ಯ ವಿಧಾನಸಭೆಗೆ ಪ್ರತಿಪಕ್ಷದ ನಾಯಕ ಆಯ್ಕೆ ಮಾಡುವಂತೆ ಕೋರಿ ವಕೀಲರೊಬ್ಬರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

legal-notice-from-lawyer-to-bjp-for-not-electing-opposition-leader-in-karnataka
ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ : ವಕೀಲರಿಂದ ಲೀಗಲ್ ನೋಟಿಸ್

By ETV Bharat Karnataka Team

Published : Sep 9, 2023, 10:33 PM IST

ಬೆಂಗಳೂರು:ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಪ್ರತಿಪಕ್ಷದ ನಾಯಕ ಆಯ್ಕೆ ಮಾಡಲು ಶಾಸಕಾಂಗ ಸಭೆ ಕರೆಯಲು ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎನ್ ಪಿ ಅಮೃತೇಶ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಜೊತೆಗೆ, ರಾಷ್ಟ್ರಪತಿ, ರಾಜ್ಯಪಾಲ, ವಿಧಾನಸಭೆ ಸ್ಪೀಕರ್ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಲೀಗಲ್ ನೋಟಿಸ್ ಪ್ರತಿಯನ್ನು ರವಾನಿಸಿದ್ದಾರೆ. ಅಲ್ಲದೇ, ವಿಪಕ್ಷ ನಾಯಕನ ಆಯ್ಕೆ ಸಭೆ ನಡೆಸಲು ನಿರ್ದೇಶಿಸಲು ವಿಫಲವಾದರೆ ಸಕ್ಷಮ ಪ್ರಾಧಿಕಾರ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ನೋಟಿಸ್​​ನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾದರೆ ಅವರು ಅಂತಿಮವಾಗಿ ವಿಪಕ್ಷ ನಾಯಕನ ಮೂಲಕ ಹೋಗಬೇಕಾಗುತ್ತದೆ. ಆದರೆ, ಬಿಜೆಪಿಯು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನಿಗೆ ಹಲವು ಅಧಿಕಾರ ಮತ್ತು ಕರ್ತವ್ಯಗಳಿವೆ. ಲೋಕಾಯುಕ್ತ, ಉಪ ಲೋಕಾಯುಕ್ತ, ಕೆಪಿಎಸ್​ಸಿ ಸದಸ್ಯರು, ಆರ್​ಟಿಐ ಆಯುಕ್ತರು, ಗ್ರಾಹಕರ ಒಕ್ಕೂಟ, ಆಡಳಿತಾತ್ಮಕ ನ್ಯಾಯ ಮಂಡಳಿ ಇತ್ಯಾದಿ ಸಾಂವಿಧಾನಿಕ ಹುದ್ದೆಗಳ ನೇಮಕಾತಿಗಳಲ್ಲಿ ವಿಪಕ್ಷ ನಾಯಕ ಭಾಗಿ ಅತ್ಯಗತ್ಯ ಎಂದಿದ್ದಾರೆ.

ಚುನಾಯಿತ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಸರ್ಕಾರದಿಂದ ದುರ್ಬಳಕೆ, ದುರಾಚಾರ, ಅಧಿಕಾರ ದುರ್ಬಳಕೆ ಇತ್ಯಾದಿ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಧ್ವನಿ ಎತ್ತುವ ಅಧಿಕಾರ ಹೊಂದಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದು ಜನರಿಗೆ ಸಮಸ್ಯೆಯಾಗಿ ತಲೆದೋರಿದೆ. ರಾಜ್ಯದಲ್ಲಿ ಹೊಸ ಸರ್ಕಾರದ ಅಧಿಕಾರಕ್ಕೆ ಬಂದು ನೂರು ದಿನ ಕಳೆದಿದೆ. ಬಿಜೆಪಿಯು ಪ್ರತಿಪಕ್ಷದ ನಾಯಕನ ಹುದ್ದೆಗೆ ಶಾಸಕರೊಬ್ಬರನ್ನು ನಿಯೋಜಿಸಿಲ್ಲ. ಸಾರ್ವಜನಿಕರ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ವಿಪಕ್ಷ ನಾಯಕನನ್ನು ನೇಮಿಸುವುದು ಬಿಜೆಪಿಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಅಡಿಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಪ್ರತಿಭಟನೆ, ಧರಣಿ ನಡೆಸುವ ಮೂಲಕ ಆಡಳಿತ ಪಕ್ಷವನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಲು ಬಿಜೆಪಿ ಪ್ರಯತ್ನಿಸಿದೆ. ವಿಪಕ್ಷ ನಾಯಕನ ಹುದ್ದೆಗೆ ಸಂಪುಟ ದರ್ಜೆ ಸ್ಥಾನಮಾನ ಇದ್ದು, ಮಹತ್ವದ ಜವಾಬ್ದಾರಿಗಳೂ ಇವೆ. ಈ ಹುದ್ದೆಯು ಕಾವಲು ನಾಯಿಯ ಸ್ಥಾನ ಹೊಂದಿದೆ. ವಿಧಾನಸಭೆಯ ಹೊರಗೆ ಮತ್ತು ಒಳಗೆ ಸರ್ಕಾರದ ಅಕ್ರಮ, ಅನಾಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಯ ಬಗ್ಗೆ ಜನರ ಪರವಾಗಿ ಧ್ವನಿ ಎತ್ತಬೇಕಿದೆ. ಆದರೆ, ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ಮೂಲಕ ಬಿಜೆಪಿಯು ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ ಎಂದು ಅವರು ನೋಟಿಸ್​​ನಲ್ಲಿ ವಕೀಲರು ವಿವರಿಸಿದ್ದಾರೆ.

ABOUT THE AUTHOR

...view details