ಬೆಂಗಳೂರು:ಕಾಂಗ್ರೆಸ್ ಸರ್ಕಾರದ ದ್ವೇಷದ ರಾಜಕಾರಣ ಎದುರಿಸಲು ನಮ್ಮ ಕಾರ್ಯಕರ್ತರಿಗೆ ನೆರವಾಗುವ ದೃಷ್ಟಿಯಿಂದ 'ಕಾನೂನು ಸಹಾಯವಾಣಿ' (18003091907) ಉದ್ಘಾಟಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಹೆಲ್ಪ್‍ಲೈನ್ ಉದ್ಘಾಟಿಸಿ ಮಾತನಾಡಿದ ಅವರು "ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ, ನಮ್ಮ ಪರವಾಗಿ ಕೆಲಸ ಮಾಡುವವರ ಮೇಲೆ ರಾಜಕೀಯ ದ್ವೇಷದ ರಾಜಕೀಯ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಕಾನೂನು ಪ್ರಕೋಷ್ಠದವರು ಈ ಹಿನ್ನೆಲೆಯಲ್ಲಿ ಯೋಗೇಂದ್ರ ಮತ್ತು ಅವರ 100 ವಕೀಲರ ತಂಡ ಸಹಾಯವಾಣಿ ಉದ್ಘಾಟಿಸಿದೆ. ಸದನದ ಒಳಗೆ ಮತ್ತು ಹೊರಗೆ ಇಂಥ ದೌರ್ನಜ್ಯದ ವಿರುದ್ಧ ಹೋರಾಟ ಸಂಘಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ" ಎಂದರು.
ಸುಳ್ಳು ಕೇಸ್ ಹಾಕಿದರೆ ಕರೆ ಮಾಡಿ:ಹೋರಾಟದ ಮೂಲಕವೇ ಬಿಜೆಪಿ ಬೆಳೆದು ಬಂದಿದೆ. ಈ ಪಕ್ಷದ ದಮನ ಇವತ್ತಿನದ್ದಲ್ಲ. ಇಂತಹ ದ್ವೇಷವನ್ನು ಎದುರಿಸಿಯೇ ನಮ್ಮ ಪಕ್ಷ ಮುಂದುವರಿದಿದೆ. ನಮ್ಮ ಕಾರ್ಯಕರ್ತರು ವಿಶ್ವಾಸ- ಧೈರ್ಯ ಕಳಕೊಳ್ಳಬಾರದು. ನಾವು ಅನ್ಯಾಯ, ಅವ್ಯವಸ್ಥೆ ವಿರುದ್ಧ ಹೋರಾಟ ಮಾಡೋಣ. ದೌರ್ಜನ್ಯ ನಡೆದರೆ, ಸುಳ್ಳು ಕೇಸು ಹಾಕಿದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಒಳಿತು ಮತ್ತು ಅವರ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ಹೈಕೋರ್ಟ್ ಪೀಠವಿರುವ ಎಲ್ಲ ಜಾಗಗಳಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮತ್ತು ವಕೀಲರ ತಂಡದ ರಚನೆ ಆಗಿದೆ. ರಾಜ್ಯದ 100ಕ್ಕೂ ಹೆಚ್ಚು ವಕೀಲರು ಈ ಸಹಾಯವಾಣಿಯ ನಿರ್ವಹಣೆ ಮಾಡಲು ಸಹಕರಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕರ್ತರ ನೆರವಿಗಾಗಿ ಸಹಾಯವಾಣಿ:ರಾಜ್ಯದಲ್ಲಿ ದ್ವೇಷದ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿ, ಸುಳ್ಳು ಆರೋಪ ಹೊರಿಸಿ ಪೊಲೀಸ್ ಸ್ಟೇಷನ್‍ನಲ್ಲಿ ದಮನ ಮಾಡಲು ಪ್ರಯತ್ನ ನಡೆದಿದೆ. ರೌಡಿ ಶೀಟರ್ ಆಗಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಗಮನಿಸಿ ಕಾರ್ಯಕರ್ತರ ನೆರವಿಗೆ ಬರುವ ದೃಷ್ಟಿಯಿಂದ ಸಹಾಯವಾಣಿ ರಚನೆ ಆಗಿದೆ. ನಮ್ಮ ಕಾರ್ಯಕರ್ತರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಕೆಲಸ ಕಳದುಕೊಳ್ಳುವಂತೆ ಮಾಡುವ ಪ್ರಯತ್ನ ಹಿಂದೆ ಆಗಿತ್ತು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಆದಾಗ ಎಫ್‍ಐಆರ್ ನೋಂದಣಿ ವೇಳೆ ವಿಳಂಬ ಮಾಡಲಾಗುತ್ತಿತ್ತು. ದೋಷಾರೋಪ ಪಟ್ಟಿ ಸಲ್ಲಿಸುವಾಗ ಅದನ್ನು ಸಮರ್ಪಕವಾಗಿ ಸಲ್ಲಿಸುತ್ತಿರಲಿಲ್ಲ ಎಂದು ಟೀಕಿಸಿದರು.