ಬೆಂಗಳೂರು :ಕೊರೊನಾ ವಾರಿಯರ್ಸ್ ಕರ್ತವ್ಯ ನಿರ್ವಹಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಪಶ್ಚಿಮ ಭಾಗದಲ್ಲಿರುವ ಅವರ ಭಾವಚಿತ್ರಕ್ಕೆ ಇಂದು ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿರು. ಕೋವಿಡ್ ನಿರ್ವಹಣಾ ಕಾರ್ಯಕ್ಕೆ ಬರದೇ ಇರುವವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೊರೊನಾಗೆ ಭಯಪಟ್ಟು ಕೆಲವರು ಬರುತ್ತಿಲ್ಲ. ಅಂತವರಿಗೆಲ್ಲ ನೋಟಿಸ್ ಕೊಡಲಾಗಿದೆ. ನೋಟಿಸ್ಗೆ ಏನು ಉತ್ತರ ಕೊಡುತ್ತಾರೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಕೊರೊನಾಗೆ ಭಯಪಡುವ ಅಗತ್ಯವಿಲ್ಲ: ಕರ್ತವ್ಯದಿಂದ ದೂರ ಹೋದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಯುದ್ಧದ ಸಂದರ್ಭದಲ್ಲಿ ಓಡಿ ಹೋದರೆ ಹೇಗೆ?. ಯಾವುದೇ ಸಂದರ್ಭದಲ್ಲೂ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದಲ್ಲಿದ್ದು ಜವಾಬ್ದಾರಿ ನಿರ್ವಹಣೆ ಮಾಡದಿದ್ದರೆ ಹೇಗೆ ? ಎಂದು ಪ್ರಶ್ನಿಸಿದ ಅವರು, ಜನರ ಸೇವೆಯನ್ನು ಎಲ್ಲರೂ ಮಾಡಬೇಕು. ಮಾಡದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.