ಬೆಂಗಳೂರು: ವಾಹನ ಸವಾರರಿಗೆ ನೀಡಲಾಗುವ ಲರ್ನಿಂಗ್ ಲೈಸೆನ್ಸ್-ಎಲ್‌ಎಲ್ ಅಧಿಕೃತ ದಾಖಲೆ ಎಂದು ಹೈಕೋರ್ಟ್ ಆದೇಶಿಸಿದೆ.
ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಬಗ್ಗೆ ಇಂದು ನ್ಯಾಯಮೂರ್ತಿ ಆರ್.ನಟರಾಜನ್ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಅರ್ಜಿದಾರ ಪರ ವಕೀಲರು ವಾದ ಮಂಡನೆ ಮಾಡಿ, ಬೆಳವಟ್ಟಿಯ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಮಂಗಳಾ ಅವರು 2009ರ ಮೇ 29 ರಂದು ಅಂಜನಾ ಎಂಬುವರ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಂಗಳಾ 10 ದಿನಗಳ ನಂತರ ಸಾವನ್ನಪ್ಪಿದ್ದರು. ನಂತರ ಮಂಗಳಾ ಅವರ ಕುಟುಂಬ ಸದಸ್ಯರು ಬೆಳಗಾವಿಯ ತ್ವರಿತ ನ್ಯಾಯಾಲಯದ ಮೆಟ್ಟಿಲೇರಿ 20 ಲಕ್ಷ ಪರಿಹಾರ ನೀಡುವಂತೆ ಕೋರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ12.6 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿತ್ತು. ಆದರೆ ಇದು ಅನ್ವಯವಾಗುವುದಿಲ್ಲ, ಏಕೆಂದರೆ ಮಂಗಳ ಲರ್ನಿಂಗ್ ಲೈಸೆನ್ಸ್-ಎಲ್‌ಎಲ್ ಹೊಂದಿದ ಅಂಜನಾ ಜೊತೆ ವಾಹನ ಸವಾರಿ ಮಾಡುತ್ತಿದ್ದರು. ಆದರೆ ಅಂಜನಾ ಕೇವಲ ಎಲ್‌ಎಲ್ ಮಾತ್ರ ಹೊಂದಿದ್ದರು. ಹೀಗಾಗಿ ಪರಿಹಾರದ ಮೊತ್ತ ನೀಡಬೇಕಾಗಿಲ್ಲ ಎಂಬ ವಾದವನ್ನು ಕಂಪನಿ ವಾದ ಮಂಡಿಸಿತ್ತು.
ಈ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ ಎಲ್‌ಎಲ್ ಹೊಂದಿರುವ ವ್ಯಕ್ತಿ ವಾಹನ ಚಲಾಯಿಸುವಾಗ ಅಪಘಾತಕ್ಕೀಡಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು. ಎಲ್‌ಎಲ್ ಹೊಂದಿದ ದ್ವಿಚಕ್ರ ವಾಹನ ಸವಾರರ ವಾಹನದ ಮೇಲೆ ಎಲ್ ಸಂಕೇತ ಹಾಕಿಕೊಂಡಿರಬೇಕು. ಅಂತೆಯೇ ಅವರೊಂದಿಗೆ ತರಬೇತುದಾರರು ಕಡ್ಡಾಯವಾಗಿ ಇರಬೇಕು. ಹೀಗಾಗಿ ವಿಚಾರಣಾ ನ್ಯಾಯಾಲಯ ನಿಗದಿಪಡಿಸಿದ್ದ 12.6 ಲಕ್ಷ ಪರಿಹಾರ ಮೊತ್ತವನ್ನು ಹೈಕೋರ್ಟ್ 13.3 ಲಕ್ಷಕ್ಕೆ ಏರಿಸಿದೆ.