ಕರ್ನಾಟಕ

karnataka

ETV Bharat / state

ಕೊರೊನಾ ಕಾಲದಲ್ಲಿ ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಗುಸು ಗುಸು: ವರಿಷ್ಠರ ಪ್ಲಾನ್ ಏನು?

ಸಚಿವ ಸಿ.ಪಿ ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿಕೊಂಡು ನಾಯಕತ್ವ ಬದಲಾವಣೆ ಕೂಗಿಗೆ ದನಿಯಾಗುತ್ತಿದ್ದಾರೆ ಎನ್ನಲಾಗಿದೆ.

leadership change issues
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ನಾಯಕತ್ವ ಬದಲಾವಣೆ ವಿಷಯ

By

Published : May 26, 2021, 9:49 AM IST

ಬೆಂಗಳೂರು:ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಲಾಗುತ್ತದೆ ಎನ್ನುವ ವದಂತಿಗಳು ಮಾತ್ರ ನಿಂತಿಲ್ಲ. ಈಗಲೂ ಕೂಡ ಅಂತಹದ್ದೇ ರೀತಿಯಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಮುನ್ನೆಲೆಗೆ ಬಂದಿದ್ದು, ಸಿಎಂ ಆಪ್ತರು ಇದನ್ನು ತಳ್ಳಿ ಹಾಕಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಆದ ಸಮಯದಿಂದಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆ. ಸಂಪುಟ ವಿಸ್ತರಣೆ, ಉಪಚುನಾವಣೆ, ಬಜೆಟ್ ಮಂಡನೆ ಎನ್ನುವ ಡೆಡ್ ಲೈನ್, ಪಂಚ ರಾಜ್ಯ ಚುನಾವಣೆ ನಂತರ ಎನ್ನುವಲ್ಲಿಗೆ ಬಂದು ನಿಂತಿದೆ. ಖುದ್ದು ಅಮಿತ್ ಶಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದರೂ ನಾಯಕತ್ವ ಬದಲಾವಣೆ ವಿಷಯ ಮಾತ್ರ ಪದೇ ಪದೇ ಹರಿದು ಬರುತ್ತಲೇ ಇದೆ.

ಇದೀಗ ಸಚಿವ ಸಿ.ಪಿ ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿಕೊಂಡು ನಾಯಕತ್ವ ಬದಲಾವಣೆ ಕೂಗಿಗೆ ದನಿಯಾಗುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಯೋಗೀಶ್ವರ್ ದೆಹಲಿ ಭೇಟಿ ಇದಕ್ಕೆ ಇಂಬು ನೀಡಿದೆ. ಆದರೆ ಅರವಿಂದ ಬೆಲ್ಲದ ತಂಡ ದೆಹಲಿಗೆ ಹೋದರೂ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡದೆ ವಾಪಸ್ಸು ಕಳಿಸಿದ್ದಾರೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಆದರೂ ಈಗ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಗೌರವಯುತವಾಗಿ ನಿರ್ಗಮನಕ್ಕೆ ಅವಕಾಶ ನೀಡಿ, ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವುದು, ಇಲ್ಲವೇ ಪಕ್ಷದಲ್ಲಿ ಅವರು ಬಯಸುವ ಜವಾಬ್ದಾರಿ ನೀಡಿವುದು, ಯಡಿಯೂರಪ್ಪ ಪುತ್ರರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ರಾಜಕೀಯ ಏಳಿಗೆಗೆ ಅವಕಾಶ ಕಲ್ಪಿಸುವ ಆಶ್ವಾಸನೆ ನೀಡಿ ನಾಯಕತ್ವ ಬದಲಾವಣೆ ಮಾಡಲಾಗುತ್ತದೆ. ಸಿಎಂ ಸ್ಥಾನದ ರೇಸ್​​ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಡಿಸಿಎಂ ಅಶ್ವತ್ಥ ನಾರಾಯಣ್ ಹಾಗು ಲಿಂಗಾಯತ ನಾಯಕರೊಬ್ಬರ ಹೆಸರು ಪರಿಶೀಲನೆಯಲ್ಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಆದರೆ ಈ ವಿಷಯವನ್ನು ಸಿಎಂ ಆಪ್ತರು ಅಲ್ಲಗಳೆದಿದ್ದಾರೆ. ರಾಜ್ಯದಲ್ಲಿ ಈಗ ನಾಯಕತ್ವ ಬದಲಾವಣೆ ಇಲ್ಲ, ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿದ್ದಾರೆ. ಯಡಿಯೂರಪ್ಪ ವಿರೋಧಿಗಳು ಈ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ದೇಶ ಕೋವಿಡ್ ಸಂಕಷ್ಟಕ್ಕೆ ಸಿಲುಕಿದೆ.‌ ದೇಶವನ್ನು ಈ ಸಂಕಷ್ಟದಿಂದ ಪಾರುಮಾಡುವ ಸವಾಲು ಕೇಂದ್ರದ ನಾಯಕರ ಮುಂದಿದೆ. ಅಲ್ಲದೆ ಕೋವಿಡ್ ನಿರ್ವಹಣೆ ನಂತರ ಪಕ್ಷದ ವರ್ಚಸ್ಸು ಕುಸಿದಿದೆ ಎನ್ನುವುದು ಆರ್​​ಎಸ್​​ಎಸ್- ಬಿಜೆಪಿ ನಾಯಕರ ಸಭೆಯಲ್ಲಿ ಪ್ರಸ್ತಾಪವಾಗಿದೆ.

ಹೀಗಾಗಿ ಇಡೀ ದೇಶದಲ್ಲಿ ಮತ್ತೆ ಬಿಜೆಪಿ ಅಲೆಯನ್ನು ಮೂಡಿಸುವ ಸವಾಲು ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಚಿಂತನೆ ನಡೆಸುವ ಸಾಧ್ಯತೆ ಕಡಿಮೆ. ಅದರಲ್ಲಿಯೂ ಯಡಿಯೂರಪ್ಪ ಅವರನ್ನು ಬದಲಾಯಿಸಿದಲ್ಲಿ ಲಿಂಗಾಯತ ಮತಗಳು ಬಿಜೆಪಿಯಿಂದ ದೂರ ಸರಿಯುವ ಆತಂಕವೂ ಇದೆ. ಹಾಗಾಗಿ ಸದ್ಯ ನಾಯಕತ್ವ ಬದಲಾವಣೆಯಂತಹ ಪ್ರಯತ್ನ ಸಾಧ್ಯತೆ ಇಲ್ಲ ಎನ್ನುವುದು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ.

ಓದಿ:ಮತ್ತೊಮ್ಮೆ ಮುನ್ನಲೆಗೆ ಬಂದ ನಾಯಕತ್ವ ಬದಲಾವಣೆ ಕೂಗು : ಕುತೂಹಲ ಮೂಡಿಸಿದ ಸಿಎಂ, ಕಟೀಲ್ ಭೇಟಿ..

ABOUT THE AUTHOR

...view details