ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ನಾಯಕತ್ವ ಬದಲಾವಣೆ ವಿಷಯ ಸದಾ ಸುದ್ದಿಯಲ್ಲೇ ಇದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ನಾಯಕತ್ವ ಬದಲಾವಣೆ ವಿಷಯ ಸದ್ದು ಮಾಡಿತ್ತು. ಇದೀಗ ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ಪಕ್ಷ ಮತ್ತು ಸರ್ಕಾರ ಎರಡರ ನಾಯಕತ್ವದ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ವಾಸ್ತವದಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ ಎನ್ನುವ ಕುರಿತ ಒಂದು ವರದಿ ಇಲ್ಲಿದೆ.
ಬೊಮ್ಮಾಯಿ ಸರ್ಕಾರ ಒಂದು ವರ್ಷದ ಆಡಳಿತ ಪೂರ್ಣಗೊಳಿಸಿದ ಸಂಭ್ರಮದಲ್ಲೇ ನಾಯಕತ್ವ ಬದಲಾವಣೆಯ ಚರ್ಚೆ ಆರಂಭಗೊಂಡಿದೆ. ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಚಾಣಾಕ್ಯ ಅಮಿತ್ ಶಾ ಸ್ಪಷ್ಟೀಕರಣ ನೀಡಿದ್ದರೂ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ವಿಷಯದಲ್ಲಿ ಚರ್ಚೆ ಮಾತ್ರ ನಿಂತಿಲ್ಲ. ಸ್ವಪಕ್ಷೀಯರಿಂದಲೇ ಈ ಬಗ್ಗೆ ಹೇಳಿಕೆಗಳು ಬಂದಿದ್ದು, ಅದನ್ನು ಪ್ರತಿಪಕ್ಷ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡಿರುವುದರಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಈ ಬಾರಿ ಹೆಚ್ಚಿನ ಮಹತ್ವ ಬಂದಿದೆ.
ಸ್ಪಷ್ಟೀಕರಣ ನೀಡಿದ ಬಿಜೆಪಿ ನಾಯಕರು: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾಯಕತ್ವ ಬದಲಾವಣೆ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಲೇ ಇರಲಿಲ್ಲ. ಆದರೆ ಈಗ ಬೊಮ್ಮಾಯಿ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿ, ತಮ್ಮ ಸ್ಥಾನ ಸೇಫ್ ಎಂದು ಹೇಳಿಕೊಂಡಿದ್ದಾರೆ. ಸಿಎಂ ಪರವಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳು ಫುಲ್ ಬ್ಯಾಟಿಂಗ್ ಮಾಡಿದ್ದಾರೆ. ಕಟೀಲ್ ಸೇರಿದಂತೆ ಪಕ್ಷದ ನಾಯಕರೂ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟೀಕರಣ ನೀಡುತ್ತಿದ್ದಾರೆ.
ಸಿಎಂ ಸ್ಥಾನ ಬದಲಾಗುತ್ತಾ?:2011 ರಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ತಮ್ಮ ಆಪ್ತ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. 2011ರ ಆಗಸ್ಟ್ 3 ರಲ್ಲಿ ಮುಖ್ಯಮಂತ್ರಿಯಾದ ಸದಾನಂದಗೌಡ ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡ ಕಾರಣದಿಂದಾಗಿ, 2012 ರ ಜುಲೈ 3 ಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ 2012 ರ ಜುಲೈ 12 ರಂದು ಯಡಿಯೂರಪ್ಪ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್ 2013 ರ ಮೇ 8 ರವರೆಗೂ ರಾಜ್ಯಭಾರ ಮಾಡಿದರು.
ಯಡಿಯೂರಪ್ಪ ಹೊರತುಪಡಿಸಿ ಇತರ ಇಬ್ಬರು ಮುಖ್ಯಮಂತ್ರಿಗಳಾಗಿದ್ದ ಸದಾನಂದಗೌಡ, ಜಗದೀಶ್ ಶೆಟ್ಟರ್ ಇಬ್ಬರಿಗೂ ವರ್ಷ ಪೂರ್ಣಗೊಳಿಸುವ ಅವಕಾಶ ಸಿಗಲಿಲ್ಲ. ಆದರೆ ಈಗ ಇಂತಹ ಸ್ಥಿತಿ ನಿರ್ಮಾಣವಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ನಂಬಿಕೆಯ ವ್ಯಕ್ತಿಯಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ಒಂದು ವರ್ಷದಲ್ಲಿ ಯಡಿಯೂರಪ್ಪ ನಂಬಿಕೆ ಉಳಿಸಿಕೊಂಡೇ ಆಡಳಿತ ನಡೆಸಿದ್ದು, ಎಲ್ಲಿಯೂ ವಿರೋಧ ಕಟ್ಟಿಕೊಳ್ಳುವ ಕೆಲಸ ಮಾಡಿಲ್ಲ.
ಸಿಎಂ ಬದಲಾವಣೆ ಇಲ್ಲ ಎಂದ ಬಿಎಸ್ವೈ: ಇಷ್ಟೇ ಅಲ್ಲ ಹೈಕಮಾಂಡ್, ರಾಜ್ಯ ನಾಯಕರು, ಸಂಘ ಪರಿವಾರದ ಪ್ರಮುಖರ ಜೊತೆ ಹೊಂದಿಕೊಂಡು ಆಡಳಿತ ನಡೆಸುತ್ತಿರುವ ಹಿನ್ನೆಲೆ ಅವರನ್ನು ಯಾವುದೇ ಕಾರಣವಿಲ್ಲದೆ ಬದಲಾವಣೆ ಮಾಡಲು ಹೈಕಮಾಂಡ್ ಮುಂದಾಗುವುದು ಕಷ್ಟ. ಯಡಿಯೂರಪ್ಪ ಬೆಂಬಲ ಬೊಮ್ಮಾಯಿಗೆ ಇರುವವರೆಗೂ ಹೈಕಮಾಂಡ್ ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಹಾಗಾಗಿಯೇ ನಿನ್ನೆ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಷಯದಲ್ಲಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಇನ್ನು 2018 ರ ಮೇ12 ಕ್ಕೆ ವಿಧಾನಸಭೆ ಚುನಾವಣೆ ನಡೆದಿದ್ದು, 2023ರ ಮೇ.11ಕ್ಕೆ ಹೊಸ ಸರ್ಕಾರ ರಚನೆಯಾಗಬೇಕು. ಅಂದರೆ ಚುನಾವಣೆಗೆ ಇನ್ನು 10 ತಿಂಗಳ ಸಮಯ ಮಾತ್ರ ಇದೆ. ಈ ಹಂತದಲ್ಲಿ ಯಾವುದೇ ಕಾರಣವಿಲ್ಲದೆ ಬೊಮ್ಮಾಯಿ ಬದಲಾವಣೆ ಮಾಡಿದಲ್ಲಿ, ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀಳಲಿದೆ. ಇಷ್ಟು ಕಡಿಮೆ ಸಮಯದಲ್ಲಿ ಹೊಸ ಮುಖ್ಯಮಂತ್ರಿ ಬಂದು ವರ್ಚಸ್ಸು ಸೃಷ್ಟಿಸಿಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಪಕ್ಷದ ಮೂಲಗಳ ಪ್ರಕಾರ, ಬೊಮ್ಮಾಯಿ ನಾಯಕತ್ವ ಬದಲಾವಣೆ ಇಲ್ಲ ಎನ್ನಲಾಗಿದೆ.