ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಿಸಿಬಿಸಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರ ಸಂಪುಟ ಸಹೋದ್ಯೋಗಿಗಳಲ್ಲೂ ಆತಂಕ ಶುರುವಾಗಿದೆ. ಪಕ್ಷನಿಷ್ಠರ ಜೊತೆಗೆ 'ಮಿತ್ರ ಮಂಡಳಿ'ಯಲ್ಲೂ ಗೊಂದಲ ಶುರುವಾಗಿದ್ದು, ಅವರೆಲ್ಲಾ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದರೆ ನಮ್ಮ ಗತಿಯೇನು ಎನ್ನುವ ಪ್ರಶ್ನೆ ಇದೀಗ ಡಿಸಿಎಂಗಳು ಹಾಗು ಸಂಪುಟದ ಬಹುತೇಕ ಸಚಿವರನ್ನು ಕಾಡುತ್ತಿದೆ. ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಇಡೀ ಸಚಿವ ಸಂಪುಟವೇ ಮಾಜಿಯಾಗಲಿದೆ. ಹೊಸದಾಗಿ ಅಧಿಕಾರಕ್ಕೆ ಬರುವ ಮುಖ್ಯಮಂತ್ರಿ ಸಂಪುಟ ರಚನೆ ಮಾಡಲಿದ್ದು ಅದರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ ಎನ್ನುವುದಕ್ಕೆ ಈಗಂತೂ ಯಾರ ಬಳಿಯೂ ಉತ್ತರವಿಲ್ಲ.
ಬಿಜೆಪಿ ಹೈಕಮಾಂಡ್‌ನಿಂದಲೂ ಈ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಆಪ್ತರಿಗೂ ಈ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಂಪುಟ ಸಹೋದ್ಯೋಗಿಗಳು ಆತಂಕಕ್ಕೆ ಸಿಲುಕಿದ್ದಾರೆ. ಹಾಗಾಗಿಯೇ ಪರ-ವಿರೋಧ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.
ಗೊಂದಲದಲ್ಲಿ ಡಿಸಿಎಂಗಳು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಮೂವರನ್ನೂ ರಾಜಕೀಯ ಲೆಕ್ಕಾಚಾರದಲ್ಲಿ ಹೈಕಮಾಂಡ್ ನೇರವಾಗಿ ಆಯ್ಕೆ ಮಾಡಿ ಕಳುಹಿಸಿದೆ. ಲಿಂಗಾಯತ ಸಮುದಾಯದಿಂದ ಲಕ್ಷ್ಮಣ ಸವದಿ, ಒಕ್ಕಲಿಗ ಸಮುದಾಯದಿಂದ ಅಶ್ವತ್ಥ ನಾರಾಯಣ್ ಹಾಗು ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಅವರಿಗೆ ಅವಕಾಶ ನೀಡಿದೆ.
ಆದರೆ ಹೈಕಮಾಂಡ್ ನಿರೀಕ್ಷೆಯನ್ನು ಈ ಮೂರೂ ಜನ ಡಿಸಿಎಂಗಳು ತಲುಪುವಲ್ಲಿ ಹಿಂದೆಬಿದ್ದಿದ್ದಾರೆ. ಇವರು ಪರ್ಯಾಯ ನಾಯಕತ್ವ ಬೆಳೆಸಿಕೊಳ್ಳುವಲ್ಲಿ ಸಫಲರಾಗಿಲ್ಲ. ಹಾಗಾಗಿ ಯಡಿಯೂರಪ್ಪ ರಾಜೀನಾಮೆ ನಂತರದಲ್ಲಿ ಬರುವ ಹೊಸ ಸಂಪುಟದಲ್ಲಿ ಅವಕಾಶ ಸಿಕ್ಕರೂ ಡಿಸಿಎಂ ಹುದ್ದೆ ಸಿಕ್ಕುವುದು ಅನುಮಾನವೇ ಆಗಿದೆ.
ಬಿಜೆಪಿ ಸಚಿವರಲ್ಲೂ ಕಾಡುತ್ತಿದೆ ಆತಂಕ: ಯಡಿಯೂರಪ್ಪ ಸಂಪುಟದಲ್ಲಿರುವ ಬಿಜೆಪಿ ಸಚಿವರಲ್ಲಿ ಕೆಲವು ಸಚಿವರಿಗೆ ಹುದ್ದೆ ಕೈತಪ್ಪುವ ಆತಂಕವಿದೆ. ಹೇಗೋ ಈಗ ಸಚಿವ ಸ್ಥಾನದ ಅವಕಾಶ ಸಿಕ್ಕಿದೆ. ಒಂದು ವೇಳೆ ನಾಯಕತ್ವ ಬದಲಾದಲ್ಲಿ ರಚನೆಯಾಗುವ ಹೊಸ ಸಂಪುಟದಲ್ಲಿ ಹೊಸಬರಿಗೆ ಅವಕಾಶ ಕೊಡುವ ನಿರ್ಧಾರ ಮಾಡಿದಲ್ಲಿ ನಮ್ಮನ್ನು ಕೇಳುವವರು ಯಾರು? ನಮ್ಮ ಪರ ಹೈಕಮಾಂಡ್ ಮಟ್ಟದಲ್ಲಿ ಯಾರು ಮಾತನಾಡುತ್ತಾರೆ? ಎನ್ನುವ ಆತಂಕದಲ್ಲಿದ್ದಾರೆ. ಕೆಲವು ಸಚಿವರ ಇಲಾಖೆಯಲ್ಲಿನ ಪ್ರಗತಿ ತೃಪ್ತಿದಾಯಕವಾಗಿಲ್ಲ, ಅವರಿಗೆ ಕೋಕ್ ನೀಡಲಾಗುತ್ತೆ ಎನ್ನುವ ಮಾತುಗಳಿದ್ದು ಆತಂಕದಲ್ಲಿಯೇ ಇದ್ದಾರೆ.