ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಗೆ ಹೋಗುವ ಪ್ರಮೇಯವೂ ಇಲ್ಲ. ಸಮಸ್ಯೆಗಳ ಬಗ್ಗೆ ರಾಜ್ಯ ನಾಯಕರ ಜೊತೆ ಮಾತನಾಡಿದ್ದು, ನಮ್ಮ ನಾಯಕರು ಎಲ್ಲವನ್ನೂ ಸರಿ ಮಾಡುತ್ತಾರೆ. ವಿಶ್ವಾಸ ಇಡಿ ಎಂದು ಬೆಂಬಲಿಗರಿಗೆ ಮನವಿ ಮಾಡಿರುವುದಾಗಿ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಹೇರೋಹಳ್ಳಿಯಲ್ಲಿ ಇಂದು ಬೆಂಬಲಿಗರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕರೆ ಮಾಡಿದ್ದರು. ಇದೆಲ್ಲ ಏಕೆ ನಡೆಯುತ್ತಿವೆ ಎಂದು ಕೇಳಿದರು?. ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಬಂದು ಭೇಟಿ ಮಾಡಿ ಅಂದರು. ಆಯ್ತು ಬರ್ತೀನಿ ಅಂದಿದೀನಿ. ಸದ್ಯ ಕ್ಷೇತ್ರದಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತಿದೆಯೋ ಇದೆಲ್ಲದರ ಬಗ್ಗೆ ಮಾಹಿತಿಯನ್ನು ಪಕ್ಷದ ನಾಯಕರಿಗೆ ನೀಡಿದ್ದೇನೆ. ಬೆಂಬಲಿಗರಿಗೂ ಇವತ್ತು ಮನವಿ ಮಾಡಿದ್ದೇನೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ಕ್ಷೇತ್ರದಲ್ಲಿ ಬಂದ ಬಳಿಕ ಏನೇನು ಬೆಳವಣಿಗೆ ಆಗಿದೆ ಅಂತಾ ಸಭೆಯಲ್ಲಿ ಬೆಂಬಲಿಗರಿಗೆ ಮಾಹಿತಿ ಕೊಟ್ಟಿದ್ದೇನೆ. ಆಗಿರುವ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಕಾಯೋಣ ಎಂದು ಹೇಳಿದ್ದೇನೆ. ಚುನಾವಣೆಗೆ ಮುನ್ನ ನನ್ನ ವಿರುದ್ಧ ಮಾತಾಡಿದ್ದು, ಹಣ ಹಂಚಿದ್ದು ಎಲ್ಲವೂ ಇದೆ. ಇದು ಯಾವುದಕ್ಕೂ ಕ್ರಮ ಆಗಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಒಂದು ಸಭೆ ಆಗಿದ್ದಾಗ ಕೂಡಾ ಇದರ ಬಗ್ಗೆ ನಾನು ಪ್ರಸ್ತಾಪ ಮಾಡಿದ್ದೆ. ಆದರೂ ಕ್ರಮ ಆಗಿಲ್ಲ ಎಂದು ತಿಳಿಸಿದರು.
ಚುನಾವಣೆಯಲ್ಲಿ ನನ್ನ ಸೋಲಿಸಬೇಕು ಅಂತಾ ಹಣ ಹಂಚಿದವರೇ ಹತ್ತು ದಿನದ ಕೆಳಗೆ ಅವರ ಹುಟ್ಟುಹಬ್ಬಕ್ಕೆ ನನ್ನ ಫೋಟೋ ಹಾಕಿಕೊಂಡು ಪೋಸ್ಟರ್ ಹಾಕಿದ್ದಾರೆ. ನನ್ನ ಫೋಟೋ ಬಳಸಿ ಅವರ ಹುಟ್ಟುಹಬ್ಬ ಮಾಡಿದ್ದಾರೆ. ನನ್ನನ್ನು ಸೋಲಿಸಲು ಹೊರಟವರೇ ಈಗ ನನ್ನ ಫೋಟೋ ಹಾಕಿಕೊಂಡು ಅವರ ಹುಟ್ಟುಹಬ್ಬ ಯಾಕೆ ಮಾಡಬೇಕು?. ಇದನ್ನು ನಮ್ಮ ಬೆಂಬಲಿಗರು ಪ್ರಶ್ನೆ ಮಾಡಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಆಗಿದೆ. ಈ ವಾತಾವರಣದಲ್ಲಿ ನಾನು ಪಕ್ಷದ ಸಂಘಟನೆ ಹೇಗೆ ಮಾಡಲಿ?. ಈಗ ಅವರು ಯಾವುದೇ ಪದಾಧಿಕಾರಿ ಅಲ್ಲ. ಅವರಿಗೆ ಎಚ್ಚರಿಕೆ ಕೊಡಿ ಎಂಬುದು ಅಷ್ಟೇ ನನ್ನ ಬೇಡಿಕೆ ಎಂದರು.