ಬೆಂಗಳೂರು:ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗು ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯ ಬಿಜೆಪಿ ಹಾಗು ಜೆಡಿಎಸ್ ನಾಯಕರು ನಾಡಿನ ಸಮಸ್ತ ಜನತೆಗೆ 2024ರ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಬಿಜೆಪಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷರಿಬ್ಬರೂ ಕವಿತೆಯ ಮೂಲಕ ಶುಭ ಕೋರಿರುವುದು ವಿಶೇಷ.
ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿ-ಬಿಎಸ್ವೈ:ನೂತನ ವರ್ಷ ಎಲ್ಲರಿಗೂ ಸಂತಸ, ಸಂಭ್ರಮ, ಉತ್ತಮ ಆರೋಗ್ಯ ಮತ್ತು ಹೊಸ ಭರವಸೆಗಳನ್ನು ಹೊತ್ತು ತರಲಿ. ಎಲ್ಲರ ಪಾಲಿಗೆ ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ-ಬೊಮ್ಮಾಯಿ: ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನೂತನ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ-ವಿಜಯೇಂದ್ರ:ಭಾರತದ ಸಾರ್ವಭೌಮತ್ವವನ್ನು ಸುಭದ್ರಗೊಳಿಸುವ ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ. ಕರ್ನಾಟಕದಲ್ಲಿ ಜಾತಿ, ಧರ್ಮಗಳನ್ನು ಒಡೆದು ಎತ್ತಿಕಟ್ಟುವ ರಾಜಕಾರಣ ಕೊನೆಯಾಗಲಿ. ಕುವೆಂಪು ಕಂಡ "ಸರ್ವ ಜನಾಂಗದ ಶಾಂತಿಯ ತೋಟ" ನಿರ್ಮಾಣವಾಗಲಿ. ಬಾಧಿಸುವ ಬರಗಾಲ ಮತ್ತೆ ಬಾರದಿರಲಿ. ಜಲ ಸಂಪತ್ತು, ಸಸ್ಯ ಸಂಪತ್ತು, ಧಾನ್ಯ ಸಂಪತ್ತುಗಳು ವೃದ್ಧಿಸಿ ಸಮೃದ್ಧ ಕರ್ನಾಟಕ ಕಂಗೊಳಿಸಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿದ್ದಾರೆ.