ಬಾಗಲಕೋಟೆ:ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್. ಸಿದ್ದರಾಮಯ್ಯ ಹೋದ ಕಡೆಯೆಲ್ಲಾ ಜನಸಾಗರ. ಸಿದ್ದರಾಮಯ್ಯ ಬರ್ತಿದ್ದಾರೆ ಎಂದರೆ ಅಲ್ಲಿ ಅಭಿಮಾನಿಗಳ ಆಗರ. ಇಂತಹ ಸಿದ್ದರಾಮಯ್ಯ ಇದೀಗ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಆದರೆ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ಜನತೆ ಸಿದ್ದು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.
ಯಾವಾಗ ಸಿದ್ದು ಬಾದಾಮಿ ತುಂಬಾ ದೂರ ಆಗುತ್ತೆ ಎಂದು ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ರೋ ಆವಾಗ್ಲೆ ಕ್ಷೇತ್ರದ ಜನತೆ, ಅಭಿಮಾನಿಗಳು ಮಾಧ್ಯಮಗೋಷ್ಟಿ ನಡೆಸಿ ಸಿದ್ದರಾಮಯ್ಯ ಬೇರೆ ಎಲ್ಲೂ ಹೋಗಬಾರದು, ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿಕೊಡುತ್ತೇವೆ. ಒಂದು ವೇಳೆ ಬೇರೆಡೆ ಹೋದರೆ ಅವರ ಮನೆ ಮುಂದೆ ಧರಣಿ ಕೂರುತ್ತೇವೆ, ವಿಷ ಕುಡಿದು ಪ್ರಾಣ ಸಹ ಕಳೆದುಕೊಳ್ಳುತ್ತೇವೆ ಎನ್ನುವ ಮಾತುಗಳನ್ನು ಸಹ ಆಡಿದ್ರು. ಮೇಲಿಂದ ಮೇಲೆ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಬಾದಾಮಿ ಜನತೆ ಒತ್ತಾಯಿಸಿದ್ರು.
ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಿದರೆ ಈ ಭಾಗದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗುತ್ತೆ ಎಂದು ಕಳೆದ ಚುನಾವಣೆಯಲ್ಲಿ ಹೇಳಲಾಗಿತ್ತು. ಆದರೆ ಲೆಕ್ಕಾಚಾರ ಉಲ್ಟಾ ಆಗಿ ಗೆಲ್ಲುವ ಅಭ್ಯರ್ಥಿಗಳು ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಸಿದ್ದರಾಮಯ್ಯ ಮತ್ತೆ ಬಾದಾಮಿಯಿಂದ ಸ್ಪರ್ಧಿಸಲಿ ಎಂದು ಅಭಿಮಾನಿಗಳು ಎಷ್ಟೇ ಒತ್ತಾಯ ಮಾಡಿದರೂ ಸಹ ಈವರೆಗೂ ಜಿಲ್ಲೆಯ ಯಾವೊಬ್ಬ ನಾಯಕನೂ ಸಹ ಸಿದ್ದರಾಮಯ್ಯ ಮತ್ತೆ ಬಾಗಲಕೋಟೆ ಜಿಲ್ಲೆಯಿಂದ, ಅದರಲ್ಲೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಮುಂದೆ ಬಂದು ಹೇಳಿಕೆ ಕೊಟ್ಟಿರಲಿಲ್ಲ. ಇದರಿಂದ ಜಿಲ್ಲೆಯ ಮಾಜಿ ಶಾಸಕರಿಗೆ ಸಿದ್ದರಾಮಯ್ಯ ಮತ್ತೆ ಬಾದಾಮಿಗೆ ಸ್ಪರ್ಧಿಸುವುದರ ಬಗ್ಗೆ ಆಸಕ್ತಿ ಇರಲಿಕ್ಕಿಲ್ಲ ಎಂಬ ಭಾವನೆ ವ್ಯಕ್ತವಾಗಿತ್ತು.
ಆದರೆ ಇದೀಗ ಜಿಲ್ಲೆಯ ಮಾಜಿ ಶಾಸಕರು ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸುವುದರ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅವರು ಸಿದ್ದು ಬಾದಾಮಿಯಿಂದಲೇ ಸ್ಪರ್ಧಿಸಲಿ ಎಂದು ಅವರ ಆಪ್ತರೂ ಆಗಿರುವ ಬಾಗಲಕೋಟೆ ಕ್ಷೇತ್ರದ ಮಾಜಿ ಶಾಸಕ ಹೆಚ್.ವೈ ಮೇಟಿ ಅಭಿಪ್ರಾಯ ಒತ್ತಾಯಿಸಿದ್ದಾರೆ.