ಬೆಂಗಳೂರು:ಕಾಂಗ್ರೆಸ್ ಪಕ್ಷದ ಎರಡನೇ ಪಟ್ಟಿ ಬಿಡುಗಡೆ ಸನ್ನಿಹಿತ ಆಗುತ್ತಿದ್ದಂತೆ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗುತ್ತಿದೆ. ಎರಡನೇ ಪಟ್ಟಿಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ ಒತ್ತಡ ಹೇರುವ ಕಾರ್ಯ ಮಾಡುತ್ತಿದ್ದಾರೆ. ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಸ್ಕ್ರೀನಿಂಗ್ ಕಮಿಟಿ ಸಭೆ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಇನ್ನೆರಡು ದಿನ ಮುಂದುವರಿಯಲಿದೆ.
ಎರಡನೇ ಪಟ್ಟಿಯ ಅಭ್ಯರ್ಥಿಗಳ ಹೆಸರನ್ನು ಏಪ್ರಿಲ್ 3 ರಂದು ಸ್ಕ್ರೀನಿಂಗ್ ಕಮಿಟಿ ಸದಸ್ಯರು ಪಕ್ಷದ ಹೈಕಮಾಂಡ್ಗೆ ನೀಡಲಿದ್ದು, ಏಪ್ರಿಲ್ 5ರಂದು ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ರಾಜ್ಯ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮುಂದೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.
ಅರೆಬೆತ್ತಲೆ ಪ್ರತಿಭಟನೆ:ಸಿದ್ದರಾಮಯ್ಯ ನಿವಾಸದ ಮುಂದೆಮೊಳಕಾಲ್ಮೂರು ಕ್ಷೇತ್ರದವರಿಂದ ಯೋಗೇಶ್ಗೆ ಟಿಕೆಟ್ ನೀಡುವಂತೆ ಪ್ರತಿಭಟನೆ ನಡೆದಿದೆ. ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಬೆಂಬಲಿಗರು ತಮ್ಮ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಆಗ ಅವರ ಅಕ್ಕ ಪಕ್ಕದಲ್ಲಿ ಇದ್ದವರು ಆತನನ್ನು ತಡೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಮನೆ ಮುಂದೆಯೂ ಜಮಾಯಿಸಿದ ದಂಡು:ಬೆಂಗಳೂರಿನ ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಒಂದು ವಿವಿಧ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ಟಿಕೆಟ್ಗಾಗಿ ಒತ್ತಡ ಹೇರುವ ಕಾರ್ಯ ಮಾಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಮನೆಯ ಮುಂದೆ ಜಮಾಯಿಸಿದ್ದರಿಂದ ಸಕಾಲಕ್ಕೆ ಕೆಪಿಸಿಸಿ ಕಚೇರಿಗೆ ಆಗಮಿಸಲು ಸಹ ಡಿಕೆಶಿಗೆ ತೊಡಕು ಉಂಟಾಯಿತು. ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಮಾಜಿ ಶಾಸಕ ಗುಬ್ಬಿ ಶ್ರೀನಿವಾಸ್ ಸೇರ್ಪಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮನೆಯ ಮುಂದೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ತುಂಬಿಕೊಂಡಿದ್ದ ಹಿನ್ನೆಲೆ ಅವರನ್ನು ಸಂಬಾಳಿಸಿ ಬರುವುದು ತಡವಾಯಿತು.
ಕಾಂಗ್ರೆಸ್ ಕಚೇರಿಯಲ್ಲೂ ಒತ್ತಡ:ಗುಬ್ಬಿ ಶ್ರೀನಿವಾಸ್ ಸೇರ್ಪಡೆ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಕೆಪಿಸಿಸಿ ಕಚೇರಿಗೆ ಕಾರ್ಯಕರ್ತರು ಆಗಮಿಸಿದ್ದರು. ಗುಬ್ಬಿ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕವಾಗಿ ಇಂದು ಶ್ರೀನಿವಾಸ್ ಜೊತೆ ಕಾಂಗ್ರೆಸ್ ಸೇರ್ಪಡೆ ಆದರು. ಚಿಕ್ಕ ಸಭಾಂಗಣದಲ್ಲಿ ಮತ್ತೊಮ್ಮೆ ಕಾರ್ಯಕ್ರಮ ಆಯೋಜಿಸಿದ ಕಾಂಗ್ರೆಸ್ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ತುಂಬಿದ್ದರು.