ಕರ್ನಾಟಕ

karnataka

ETV Bharat / state

ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಪಕೋಡಾ-ತರಕಾರಿ ಮಾರಿ ವಕೀಲರ ಪ್ರತಿಭಟನೆ

ವಕೀಲರ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ. ಹೀಗಾಗಿ, ಮೋದಿ ಹೇಳಿದಂತೆ ಪಕೋಡಾ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎಂದಿನಂತೆ ಕೋರ್ಟ್‌ಗಳ ಭೌತಿಕ ಕಲಾಪಗಳನ್ನು ಶೀಘ್ರದಲ್ಲಿಯೇ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ..

Lawyers Protest
ವಕೀಲರ ಪ್ರತಿಭಟನೆ

By

Published : Oct 6, 2020, 7:31 PM IST

ಬೆಂಗಳೂರು :ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಕಲಾಪಗಳು ನಡೆಯದಿರುವುದಕ್ಕೆ ಹಾಗೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ನೆರವಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಂದು ವಕೀಲರು ಪಕೋಡ-ತರಕಾರಿ ಮಾರಿ ಪ್ರತಿಭಟಿಸಿದರು.

ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ 5 ವರ್ಷಗಳ ಕಾನೂನು ಪದವಿ ವಕೀಲರ ಸಂಘದ ಪದಾಧಿಕಾರಿಗಳು ಪಕೋಡಾ, ತರಕಾರಿ ಮಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ. ಎಸ್ ಉಮೇಶ್‌ಕುಮಾರ್, ವಕೀಲರಾದ ಭಕ್ತವತ್ಸಲ, ಅಯಾಜ್ ಅಹ್ಮದ್, ಕೆ ಎಸ್ ರಮೇಶ್ ಸೇರಿ 80ಕ್ಕೂ ಅಧಿಕ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೈಕೋರ್ಟ್ ವಕೀಲ ಡಾ. ಎಸ್ ಉಮೇಶ್‌ಕುಮಾರ್

ಪ್ರತಿಭಟನೆ ವೇಳೆ ಸಂಘದ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಡಾ. ಎಸ್ ಉಮೇಶ್‌ಕುಮಾರ್ ಮಾತನಾಡಿ, ಕೊರೊನಾ ಬಂದಾಗಿನಿಂದ ಕೋರ್ಟ್​ಗಳು ಮುಚ್ಚಿವೆ. ಇದೀಗ ಸೀಮಿತವಾಗಿ ಆನ್‌ಲೈನ್ ಕೋರ್ಟ್‌ಗಳು ನಡೆಯುತ್ತಿವೆ. ಆದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ವರ್ಚುಯಲ್ ಕೋರ್ಟ್‌ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್, ಇಂಟರ್ನೆಟ್ ಸೌಲಭ್ಯ ಹೊಂದಿಸಿಕೊಳ್ಳುವುದು ಸಾಧ್ಯವಿಲ್ಲ. ಗ್ರಾಮೀಣ ಭಾಗದಿಂದ ಬಂದಿರುವ ಶೇ.60ರಷ್ಟು ವಕೀಲರು ಇಂದಿಗೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ವಕೀಲರ ಸಂಕಷ್ಟ ವಿವರಿಸಿದರು.

ಅಲ್ಲದೇ, ಅನ್‌ಲಾಕ್ ಪ್ರಕ್ರಿಯೆಯಲ್ಲಿ ಈಗಾಗಲೇ ಮಾಲ್, ಚಿತ್ರಮಂದಿರ, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನೂ ತೆರೆದಿದ್ದಾರೆ. ಶಾಲೆಗಳನ್ನೂ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ಕೋರ್ಟ್‌ಗಳನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಇದರಿಂದಾಗಿ ವಕೀಲರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ವಕೀಲರು ತಮ್ಮ ಮನೆ ನಿರ್ವಹಣೆ, ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಸೇರಿ ದೈನಂದಿನ ಖರ್ಚುಗಳನ್ನು ನಿಭಾಯಿಸಲಾಗದೆ ಪರಿತಪಿಸುತ್ತಿದ್ದಾರೆ ಎಂದರು.

ವಕೀಲರ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ. ಹೀಗಾಗಿ, ಮೋದಿ ಹೇಳಿದಂತೆ ಪಕೋಡಾ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎಂದಿನಂತೆ ಕೋರ್ಟ್‌ಗಳ ಭೌತಿಕ ಕಲಾಪಗಳನ್ನು ಶೀಘ್ರದಲ್ಲಿಯೇ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಫಿಸಿಕಲ್ ಕೋರ್ಟ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details