ಬೆಂಗಳೂರು : ನ್ಯಾಯಾಲಯಗಳಲ್ಲಿ ವರ್ಚುವಲ್ ಕೋರ್ಟ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಹೈಕೋರ್ಟ್ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘ (ಎಎಬಿ) ಅಸಮಾಧಾನ ವ್ಯಕ್ತಪಡಿಸಿದೆ.
ವರ್ಚುವಲ್ ಕೋರ್ಟ್ ವ್ಯವಸ್ಥೆಗೆ ಬೆಂಗಳೂರು ವಕೀಲರ ಸಂಘ ಆಕ್ಷೇಪ !
ವರ್ಚುವಲ್ ಕೋರ್ಟ್ ವ್ಯವಸ್ಥೆಗೆ ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಬ್ಬರಿಗೂ ಪತ್ರ ಬರೆದಿದೆ.
ವರ್ಚುವಲ್ ಕೋರ್ಟ್ ವ್ಯವಸ್ಥೆ ಜಾರಿಗೊಳಿಸುವ ಮುನ್ನ ಏಷ್ಯಾದಲ್ಲಿಯೇ ಅತಿದೊಡ್ಡ ವಕೀಲರ ಸಂಘವಾಗಿರುವ ಬೆಂಗಳೂರು ವಕೀಲರ ಸಂಘದಿಂದ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು. ಆದರೆ ಹೈಕೋರ್ಟ್ಗಾಗಲೀ, ಸುಪ್ರೀಂ ಕೋರ್ಟ್ಗಾಗಲೀ ವಕೀಲ ಸಮುದಾಯದ ಸಲಹೆ ಪಡೆದುಕೊಳ್ಳಬೇಕು ಎನ್ನಿಸದಿರುವುದು ಬೇಸರದ ಸಂಗತಿ. ವಕೀಲರೊಂದಿಗೆ ಸಮಾಲೋಚಿಸದೇ ಕೋರ್ಟ್ ವ್ಯವಹಾರಗಳನ್ನು ಕಂಪ್ಯೂಟರೀಕರಣ ಮಾಡಿರುವುದು ಸಮಂಜಸವಲ್ಲ ಮತ್ತು ಒಪ್ಪಿತವಲ್ಲ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ವರ್ಚುವಲ್ ಕೋರ್ಟ್ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೊಳಿಸಿರುವ ಪರಿಣಾಮ ಹಲವು ವಕೀಲರಿಗೆ ಕೆಲಸ ಇಲ್ಲದಂತಾಗುತ್ತದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳಲ್ಲಿ ಆರೋಪಿತರು ಕೋರ್ಟ್ಗಳಿಗೆ ತೆರಳಿ ವಕೀಲರ ಮೂಲಕ ದಂಡ ಪಾವತಿಸುತ್ತಿದ್ದರು. ಇದೀಗ ಈ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸಿದ್ದು ಟ್ರಾಫಿಕ್ ಇ-ಚಲನ್ ಜಾರಿಗೆ ತರಲಾಗಿದೆ. ಇದರಿಂದ ಕನಿಷ್ಠ 300 ಮಂದಿ ವಕೀಲರ ಬದುಕು ಅತಂತ್ರವಾಗಲಿದೆ. ಹೀಗಾಗಿ ನಮ್ಮ ಅಸಮಾಧಾನವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಹೊಸ ವ್ಯವಸ್ಥೆಯಲ್ಲಿ ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದೇವೆ ಎಂದಿರುವ ಸಂಘ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಬ್ಬರಿಗೂ ಪತ್ರ ಬರೆದಿದೆ.