ಬೆಂಗಳೂರು:ಕೊರೊನಾ ಸೋಂಕಿಗೆ ಚಿಕಿತ್ಸೆ ಕಂಡು ಹಿಡಿಯಲು ಔಷಧಿ ಕಂಪನಿಗಳು ಹರಸಾಹಸ ಪಡುತ್ತಿವೆ. ಸರ್ಕಾರ ಕೂಡ ಕೊರೊನಾ ಲಸಿಕೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲು ಸಿದ್ಧವಿದೆ. ಈ ಮಧ್ಯೆ ವಕೀಲರೊಬ್ಬರು ಸಾರಾಯಿ ಬಳಸಿ ಸೋಂಕಿಗೆ ಚಿಕಿತ್ಸೆ ನೀಡಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೊರೊನಾಗೆ 'ಸಾರಾಯಿ' ಮದ್ದು: ಸರ್ಕಾರಕ್ಕೆ ಸಲಹೆ ನೀಡಿದ ವಕೀಲ!
ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ಚರ್ಚೆ ಮಾಡಲಾಗುತ್ತಿದೆ. ಔಷಧಿ ತರಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ. ಆದ್ರೆ ಸೋಂಕಿನ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಸಾರಾಯಿ ಬಳಸಿ ಸೋಂಕಿಗೆ ಚಿಕಿತ್ಸೆ ನೀಡಬಹುದು ಎಂದು ವಕೀಲರೊಬ್ಬರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ತುಮಕೂರಿನ ಶಿರಾ ಮೂಲದ ವಕೀಲ ಎಲ್. ರಾಜಣ್ಣ ಈ ಸಲಹೆ ನೀಡಿರುವವರು. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಈ ಕುರಿತು ಆಲೋಚಿಸಬೇಕು. ಡಿಸ್ಟಿಲರಿಗಳು ಸರ್ಕಾರಗಳ ನಿಯಂತ್ರಣದಲ್ಲಿ ಇರುವುದರಿಂದ ಸಾರಾಯಿ ಉತ್ಪಾದನೆ ಮಾಡಿಸುವುದು ಸುಲಭ. ಗುಣಮಟ್ಟದ ಸಾರಾಯಿ ಉತ್ಪಾದಿಸಿ ರೋಗಿಗಳ ದೈಹಿಕ ಸಾಮರ್ಥ್ಯ ಆಧರಿಸಿ ಸಿರಪ್ ರೀತಿಯಲ್ಲಿ ಅಲ್ಪ ಪ್ರಮಾಣದಲ್ಲಿ ನೀಡಿದರೆ ಅತ್ಯಂತ ವೇಗವಾಗಿ ಸೋಂಕು ನಿವಾರಿಸಬಹುದು ಎಂದಿದ್ದಾರೆ.
ಆಲ್ಕೋಹಾಲ್ ವೈರಸ್ ಹಾಗೂ ಬ್ಯಾಕ್ಟಿರಿಯಾಗಳನ್ನು ವೇಗವಾಗಿ ಕೊಲ್ಲುತ್ತದೆ ಎಂದು ಈಗಾಗಲೇ ಸಾಬೀತಾಗಿದೆ. ಅದಕ್ಕಾಗಿಯೇ ಸ್ಯಾನಿಟೈಸರ್ಗಳಲ್ಲಿಯೂ ಆಲ್ಕೋಹಾಲ್ ಸೇರಿಸಲಾಗುತ್ತದೆ. ಸಾರಾಯಿ ಹಾಗೂ ಸೇಂದಿಗಳಲ್ಲಿಯೂ ಆಲ್ಕೋಹಾಲ್ ಇರುತ್ತದೆ. ಸೇಂದಿಗಿಂತ ಸಾರಾಯಿ ಕೊರೊನಾ ಚಿಕಿತ್ಸೆಗೆ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುಣಮಟ್ಟದ ಸಾರಾಯಿ ತಯಾರಿಸಿ ಕೊರೊನಾ ಚಿಕಿತ್ಸೆಗೆ ಬಳಸಬಹುದು ಎಂದು ಸಲಹೆ ಇತ್ತಿದ್ದಾರೆ ರಾಜಣ್ಣ.
ನಮ್ಮ ಪೂರ್ವಜರು ಸೇಂದಿ ಹಾಗೂ ಸಾರಾಯಿ ಬಳಸುತ್ತಿದ್ದರು. ಇದರಿಂದ ಹಲವು ರೋಗಗಳು ಮಾಯವಾಗುತ್ತಿದ್ದವು. ತೆಂಗಿನ ಮರ ಹಾಗೂ ಈಚಲು ಮರಗಳ ಹೊಂಬಾಳೆಗಳಿಂದ ಮತ್ತು ಕೆಂಪು ಅಕ್ಕಿಯಿಂದ ಗುಣಮಟ್ಟದ ಸಾರಾಯಿ ತಯಾರಿಸುತ್ತಿದ್ದರು. ಆದರೆ ಸರ್ಕಾರಗಳು ಸಾರಾಯಿ ತಯಾರಿಕೆಯನ್ನು ನಿಷೇಧಿಸಿವೆ. ಹೀಗಾಗಿ ಸರ್ಕಾರಗಳೇ ಡಿಸ್ಟಿಲರಿಗಳ ಮೂಲಕ ಗುಣಮಟ್ಟದ ಸಾರಾಯಿ ಉತ್ಪಾದಿಸಿ, ಸೋಂಕು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ವಕೀಲ ರಾಜಣ್ಣ ಮನವಿ ಮಾಡಿದ್ದಾರೆ.