ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಆಕೆ ಉಳಿದುಕೊಂಡಿದ್ದ ಮನೆಗೆ ಕರೆದುಕೊಂಡು ಹೋಗಿರುವ ಎಸ್ಐಟಿ ಮಹಜರು ಮಾಡಿಸುತ್ತಿದ್ದು, ಮಲ್ಲೇಶ್ವರಂ ಅಪಾರ್ಟ್ಮೆಂಟ್ ಗೂ ತೆರಳಿ ಅಲ್ಲಿಯೂ ತನಿಖೆ ನಡೆಸಲಿದೆ.
ಸಿಎಂ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ವಕೀಲ ಜಗದೀಶ್ ಪ್ರಕರಣ ದಾಖಲಾಗಿ ಸಂತ್ರಸ್ತೆಯನ್ನು ಮೆಡಿಕಲ್ ಟೆಸ್ಟ್ ಒಳಪಡಿಸಿದ್ದರೂ ರಮೇಶ್ ಜಾರಕಿಹೊಳಿಯನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಇಂದು ಏನಾದರೂ ಬಂಧಿಸದಿದ್ದರೆ ಕೋರ್ಟ್ ಮೊರೆ ಹೋಗುವುದಾಗಿ ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಕುಮಾರ್ ಎಚ್ಚರಿಸಿದ್ದಾರೆ.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ಭ್ರಷ್ಟರ ವಿರುದ್ಧ ಸಮರ ಸಾರಿದ್ದೇನೆ. ಹೀಗಿದ್ದರೂ 2010 ರಲ್ಲಿ ಮಾಜಿ ಗೃಹ ಸಚಿವರೊಬ್ಬರು ಹಾಗೂ ಸಂಬಂಧಿಕರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ, ಹಲ್ಲೆ ಸೇರಿದಂತೆ 10ಕ್ಕೂ ಹೆಚ್ಚು ಸುಳ್ಳು ಪ್ರಕರಣ ದಾಖಲಿಸಿದ್ದರು. ನಿರಂತರ ಕಾನೂನು ಹೋರಾಟ ಮಾಡಿ ಎಲ್ಲಾ ಕೇಸ್ಗಳನ್ನು ಗೆದ್ದಿರುವೆ ಎಂದು ಹೇಳಿದ್ದಾರೆ.
ಓದಿ: ಬಿಜೆಪಿ ಹೈಕಮಾಂಡ್ಗೆ ಈಶ್ವರಪ್ಪ ಪತ್ರ: ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ಬಿಎಸ್ವೈಗೆ ಡಿಕೆಶಿ ಒತ್ತಾಯ
ನನ್ನನ್ನು ರೌಡಿಶೀಟರ್ ಎಂದು ಅಣಕಿಸಿದವರಿಗೆ ತಿರುಗೇಟು ಕೊಟ್ಟಿರುವ ಜಗದೀಶ್ ಸಿಎಂ ವಿರುದ್ಧವೂ ಗರಂ ಆಗಿದ್ದಾರೆ. ನನ್ನ ಹೋರಾಟದ ಹತ್ತಿಕ್ಕಿಸುವ ಮೂಲಕ ನನ್ನ ಪತ್ನಿಯನ್ನು ದೂರ ಮಾಡಿಕೊಂಡಿದ್ದೇನೆ. ಈಗ ಯುವತಿ ಪರ ಹೋರಾಟ ನಡೆಸಿದ್ದೇನೆ, ಎಂತಹ ಸಂಕಷ್ಟ ಬಂದರೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದ್ದಾರೆ.