ಕರ್ನಾಟಕ

karnataka

ETV Bharat / state

ಸಣ್ಣ ಕಾರಣಗಳಿಗೆ 'ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ' ಅನ್ವಯ ಮಾಡಿದರೆ ತೊಂದರೆ: ವಕೀಲ ಸಿ.ವಿ ನಾಗೇಶ್‌ - ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ

'ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ' ಅನ್ವಯ ಮಾಡಿದಲ್ಲಿ ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ತೊಂದರೆಯಾಗಲಿದೆ' - ಹಿರಿಯ ವಕೀಲ ಸಿ.ವಿ ನಾಗೇಶ್‌

High Court Of Karnataka
ಹೈಕೋರ್ಟ್​

By

Published : Feb 17, 2023, 8:11 AM IST

ಬೆಂಗಳೂರು: ಸಣ್ಣ ಸಣ್ಣ ಕಾರಣಗಳಿಗೆ ಮಠಗಳ ವಿರುದ್ದ 'ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ' ಅನ್ವಯ ಮಾಡಿದಲ್ಲಿ ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ತೊಂದರೆಯಾಗಲಿದೆ ಎಂದು ಹಿರಿಯ ವಕೀಲ ಸಿ.ವಿ ನಾಗೇಶ್‌ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠಕ್ಕೆ ಈ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಶರಣರ ಪರ ವಾದ ಮಂಡಿಸಿದ ಅವರು, 'ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2)ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ಆರಂಭಕ್ಕೂ ಮೊದಲೇ ಮಾಡಿರುವ ಈ ನಿರ್ಬಂಧದ ಆದೇಶ ಸಿಂಧು ವಾಗುವುದಿಲ್ಲ. ವಿಚಾರಣೆಯನ್ನು ಬಾಕಿ ಇರಿಸಿ ಎಂದು ಹೇಳುವ ಶಬ್ದವು ದೋಷಾರೋಪ ಹೊರಿಸಿದ ನಂತರ ಆರಂಭವಾಗುವ ವಿಚಾರಣೆ ಎಂದೇ ಅರ್ಥೈಸಬೇಕಾಗುತ್ತದೆ' ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಒಮ್ಮೆ ಮಾಡಿದ ಅಪರಾಧಕ್ಕೆ ನಿರಂತರ ಅಪರಾಧಗಳ ಸರಮಾಲೆ ಎಂದು ವ್ಯಾಖ್ಯಾನಿಸಲು ಆಗುವುದಿಲ್ಲ. ಅಂತೆಯೇ, ಈ ಕಾಯ್ದೆಯ ಕಲಂ 3 ಎಫ್‌ ಮತ್ತು ಕಾಯ್ದೆಯ ಪೀಠಿಕೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಅರ್ಥೈಸುವುದಾದರೆ ಶರಣರ ವಿರುದ್ಧ ಮಾಡಲಾದ ಆರೋಪವು ಈ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅವರು ವಿವರಿಸಿದರು.

ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದೆ. ಇದೇ ವೇಳೆ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌ ವಸ್ತ್ರದ ಅವರ ನೇಮಕಾತಿ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆಯೂ ಮಾರ್ಚ್‌ 2ರಂದೇ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಮೂರ್ತಿಗಳು ಮಾಹಿತಿ ನೀಡಿದರು.

ವಿಚಾರಣೆ ಮುಂದೂಡಿದ್ದ ನ್ಯಾಯಪೀಠ: ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧೀಶರು ಪ್ರಸ್ತುತ ವಿಚಾರಣಾಧೀನ ಕೈದಿಯಾಗಿದ್ದು, ಜೈಲಿಗೆ ಹೋಗುವ ಮುನ್ನ ಮಠಕ್ಕೆ ಉಸ್ತುವಾರಿ ಸ್ವಾಮೀಜಿ ಅವರನ್ನು ನೇಮಕ ಮಾಡಲು ಯಾವ ಅಧಿಕಾರ ಹೊಂದಿದ್ದರು ಮತ್ತು ಈ ದಿಸೆಯಲ್ಲಿ ಏನಾದರೂ ಲಿಖಿತ ನಿಯಮಗಳಿವೆಯೇ ಎಂದು ಮಠದ ಪರ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿ ಆಗಿ ನೇಮಕ ಮಾಡಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ, ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರು ಮತ್ತು ಭಕ್ತರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಿಚಾರಣೆಯನ್ನೂ ಜನವರಿ 23ಕ್ಕೆ ಮುಂದೂಡಿತು.

ವಸ್ತ್ರದ ಆಡಳಿತಾಧಿಕಾರಿ ನೇಮಕದ ಪ್ರಶ್ನೆ::ಶಿವಮೂರ್ತಿ ಮುರುಘಾ ಶರಣರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ, ರಾಜ್ಯ ಸರ್ಕಾರ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

ಇದನ್ನೂ ಓದಿ:ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ABOUT THE AUTHOR

...view details