ಬೆಂಗಳೂರು: ಗ್ರಾಮ ಪಂಚಾಯತ್ಗಳಿಗೆ ಶೀಘ್ರವೇ ಚುನಾವಣೆ ನಡೆಸಲು ತೀರ್ಮಾನಿಸಲಾಗಿದ್ದು, ಅಲ್ಲಿಯವರೆಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ಗಳಿಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ಆಡಳಿತಾಧಿಕಾರಿಗಳ ನೇಮಕವಾಗಲಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಉಪ ಖನಿಜ ನಿಯಮಾವಳಿ ಬದಲಿಸಲಾಗಿದ್ದು, ತೂಕದ ಮೇಲೆ ರಿಯಾಯಿತಿ, ಬಿಲ್ನಲ್ಲಿ ಕಡಿಮೆ ರಾಯಲ್ಟಿ, ಸಣ್ಣ ಪ್ರಮಾಣದ ತೆರಿಗೆ, ಗ್ರಾನೈಟ್ ಉದ್ಯಮಕ್ಕೆ ರಾಯಲ್ಟಿ ತೆರಿಗೆ ಕಡಿಮೆ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್ ವಿಚಾರ ಚರ್ಚೆಗೆ ಬಂದು ನಡೆಸಲು ಸಾಧ್ಯವಾಗಲಿಲ್ಲ. ಬೆಲೆ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾಪ ಮಂಡಿಸಲಾಯಿತು. ಆದರೆ ವಿಷಯಗಳು ಹೆಚ್ಚಿದ್ದ ಕಾರಣ ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೆತ್ತಿಕೊಳ್ಳಲಿಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದರು.
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಗಳೂರು ಕೇಂದ್ರ ವಿವಿಯ ಸೆಂಟ್ರಲ್ ವಿವಿ ಹೆಸರು ಬದಲಿಸಿ ಬೆಂಗಳೂರು ಸಿಟಿ ವಿವಿ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದ್ದು, ಸರ್ಕಾರಿ ವಿಜ್ಞಾನ ಕಾಲೇಜಿಗೆ ವಿವಿ ಸ್ವರೂಪ ನೀಡಿ ನೃಪತುಂಗ ವಿವಿ ಎಂದು ಹೆಸರು ಬದಲಿಸಿ ಆದೇಶ ಹೊರಡಿಸಲಾಗಿದೆ ಎಂದರು. 1,694 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಿದ್ದು, 1,307 ಆರೋಗ್ಯ ಉಪ ಕೇಂದ್ರಗಳನ್ನು ಕ್ಷೇಮ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ ಎಂದರು.
ಗಣೇಶ ವಿಸರ್ಜನೆ, ರೈತ ಹೋರಾಟ, ಇತರೆ ಕಾರ್ಯದಲ್ಲಿ ಭಾಗವಹಿಸಿದ್ದ ಹೋರಾಟಗಾರರ ಪ್ರಕರಣ ವಾಪಸ್ ಪಡೆಯಲಾಗಿದೆ. ಇರುವ ತೋಟಗಾರಿಕೆ ಕಾಲೇಜು ಸಾಕು, ಹಾಸನ ಹಾಗೂ ಸಿಂಧಗಿ ಕಾಲೇಜಿಗೆ ಹಿಂದಿನ ಸರ್ಕಾರ ಅನುಮೋದಿಸಿತ್ತು. ಇದನ್ನು ನಿರ್ಮಿಸುವುದು ಬೇಡ ಎಂದು ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ ವಿಜ್ಞಾನ ಗ್ಯಾಲರಿ ನಿರ್ಮಿಸಲು 2013-14ರಲ್ಲಿ ಅನುಮೋದನೆಯಾಗಿತ್ತು. ₹ 20 ಕೋಟಿ ಫಂಡ್ನೊಂದಿಗೆ ಆರಂಭಿಸಲು ನಿರ್ಧಾರಿಸಲಾಗಿದೆ ಎಂದರು.
ಲೋಕ ಶಿಕ್ಷಣ ಟ್ರಸ್ಟ್ಗೆ ನೀಡಿದ್ದ ಕೆಂಗೇರಿ ಬಳಿಯ ಭೂಮಿ ಅವರಿಗೇ ನೀಡಲು ನಿರ್ಧರಿಸಿದ್ದು, ಹುಳಿಮಾವು ಹಾಗೂ ಇತರೆ ಘಟಕದಿಂದ ಕೊಲಾರಕ್ಕೆ ಕೆ.ಸಿ ವ್ಯಾಲಿ ಹೆಚ್ಚುವರಿ ನೀರು ಒಯ್ಯಲು ತೀರ್ಮಾನಿಸಲಾಗಿದೆ ಎಂದರು. ಉಡುಪಿಯ ಕೆಲ ಗ್ರಾಮ ಪಂಚಾಯತ್ ಸೇರಿಸಿ ಪಟ್ಟಣ ಪಂಚಾಯತ್ ಮಾಡಲು ತೀರ್ಮಾನಿಸಿದ್ದು, ನಗರ ಗ್ರಾಮಾಂತರ ಯೋಜನಾ ಕಾಯ್ದೆ ತಿದ್ದುಪಡಿಯಾಗಿದೆ ಎಂದರು.
ಕೊರೊನಾದಿಂದ ಕೋ-ಆಪರೇಟಿವ್ ಸೊಸೈಟಿಗೆ ನೇಮಕ ಬಾಕಿಯಿದೆ. ಶುಗರ್ ಕಾರ್ಖಾನೆ ಹೊರತುಪಡಿಸಿ ಉಳಿದ ಸೊಸೈಟಿಗಳ ಚುನಾವಣೆಗೆ ತೀರ್ಮಾನಿಸಲಾಗಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲು ಅವಕಾಶ ಸಿಗಲಿದೆ ಎಂದರು.
ನಗರಾಭಿವೃದ್ಧಿ ಇಲಾಖೆಯಡಿ ನೀರು ಸರಬರಾಜು ಮಂಡಳಿಗೆ ₹ 100 ಕೋಟಿ ಸಾಲ ನೀಡಲು ತೀರ್ಮಾನಿಸಿದ್ದು, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಡಿ ವೈದ್ಯರ ನೇಮಕ ಸಂದರ್ಭ ಶೇ. 2ರಷ್ಟು ಮಾರ್ಕ್ಸ್ ವೇಟೇಜ್ ನೀಡಲು ತೀರ್ಮಾನಿಸಿದೆ. ಸಿಎಆರ್, ಡಿಎಆರ್, ಕೆಎಸ್ಆರ್ಪಿ ವಿವಿಧ ಪೊಲೀಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್ಟೇಬಲ್ಗಳು ಉನ್ನತ ಹುದ್ದೆಯ ಪರೀಕ್ಷೆಗೆ ಮುಂದಾದರೆ 10 ಅಂಕ ಗ್ರೇಸ್ ನೀಡಲು ತೀರ್ಮಾನಿಸಲಾಗಿದೆ ಎಂದರು.