ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಬೇಹುಗಾರಿಕೆ ಪಡೆ ಸಂಪೂರ್ಣ ವೈಫಲ್ಯವಾಗಿದೆ. ಡಿ.ಜೆ.ಹಳ್ಳಿ ಇರಬಹುದು, ಬೆಳಗಾವಿ ಘಟನೆ ಇರಬಹುದು ಎಲ್ಲದರಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿಚಾರದ ಬಗ್ಗೆ ಮಾತನಾಡಿ, ಶಿವಾಜಿ, ರಾಯಣ್ಣ ಇಬ್ಬರೂ ಮಹಾಪುರುಷರೇ. ಬೆಳಗಾವಿ ಘಟನೆಯನ್ನ ನೋಡ್ತಿದ್ದೇನೆ. ಸರ್ಕಾರ ಅಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡಬೇಕು. ಎರಡೂ ಸಂಘಟನೆಗಳು ಶಾಂತಿಯಿಂದಿರಬೇಕು. ಮೊದಲೇ ಎರಡೂ ಸಮುದಾಯದವರನ್ನು ಕರೆಸಿ ಮಾತನಾಡಬಹುದಿತ್ತು. ತಕ್ಷಣವೇ ಅಲ್ಲಿ ಶಾಂತಿ ಮೂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರ ದಲಿತ ಯುವಕನ ಹತ್ಯೆ ಬಗ್ಗೆ ಮಾತನಾಡಿ, 21ನೇ ಶತಮಾನ ಬಂದರೂ ಇಂತಹ ಅಮಾನವೀಯ ಘಟನೆ ನಡೆಯುತ್ತಿದೆ. ಅದನ್ನ ನಿಯಂತ್ರಿಸುವ ಕೆಲಸ ಆಗಬೇಕು. ಮೊದಲು ತಪ್ಪಿತಸ್ಥರನ್ನ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.