ಕರ್ನಾಟಕ

karnataka

ETV Bharat / state

ಖಾಸಗಿ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ತಿಳಿಯಲು ಸುಲಭ ಉಪಾಯ : 'Search My Bed' ಪೋರ್ಟಲ್ ಅನಾವರಣ - Search My Bed portal launch

ಬೆಡ್​ ಬ್ಲಾಕಿಂಗ್​ ದಂಧೆ ತಡೆಯಲು ಬಿಬಿಎಂಪಿ ಮತ್ತು ಸರ್ಕಾರ ಹೊಸ ಪ್ಲಾನ್​ ಮಾಡಿವೆ. ಇಂದು ಸರ್ಚ್ ಮೈ ಬೆಡ್ ಪೋರ್ಟಲ್ ಅನ್ನ ವರ್ಚುವಲ್ ಮೂಲಕ ಸಚಿವ ಸುಧಾಕರ್ ಉದ್ಘಾಟನೆ ಮಾಡಿದರು. ಸಂಸದ ತೇಜಸ್ವಿ ಸೂರ್ಯ, ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಈ ವರ್ಚುವಲ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.‌

'Search My Bed' ಪೋರ್ಟಲ್ ಲಾಂಚ್
'Search My Bed' ಪೋರ್ಟಲ್ ಲಾಂಚ್

By

Published : May 9, 2021, 1:03 PM IST

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಹೀಗಾಗಿ, ಯಾವ ಆಸ್ಪತ್ರೆಗೆ ಹೋದರೂ ನೋ ಬೆಡ್ ಬೋರ್ಡ್​ಗಳು ಕಾಣುತ್ತಿವೆ. ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂಬುದನ್ನ ತಿಳಿಯಲು ಆಗದೇ, ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ರೋಗಿಗಳನ್ನು ಹೈರಾಣಿಗಿಸಿದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ದಾಖಲು ಆಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಇದನ್ನ ತಪ್ಪಿಸಲು ಫನಾ ಸಂಘವೂ Search My Bed ಪೋರ್ಟಲ್ ಶುರು ಮಾಡಿದೆ.

ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲೇ ಈ ವ್ಯವಸ್ಥೆ ಮಾಡಬೇಕಿತ್ತು. ಆದರೆ ಸಾರ್ವಜನಿಕರಿಗೆ ಈಗ ಅನುವು ಮಾಡಿಕೊಡಲಾಗುತ್ತಿದೆ. ಕೊರೊನಾದಿಂದ ಸಾಕಷ್ಟು ಸವಾಲುಗಳು ಎದುರಾಗಿದ್ದು, ಅದನ್ನ ಎಲ್ಲರೂ ಎದುರಿಸಬೇಕಿದೆ. ಈಗಿನ ಡಿಜಿಟಲ್ ಯುಗದಲ್ಲಿ ರಿಯಲ್ ಟೈಂ ಬೆಡ್ ಸ್ಟೇಟಸ್ ಅಗತ್ಯವಿತ್ತು. ‌ಕೇವಲ 10 ದಿನದಲ್ಲಿ ಈ ಪೋರ್ಟಲ್ ಮಾಡಿದ್ದಾರೆ. ಈ ಪೋರ್ಟಲ್ ಜನ ಸಾಮಾನ್ಯರಿಗೆ ಸಹಾಯವಾಗಬೇಕು ಅಂದರೆ ರಿಯಲ್ ಟೈಂ ಬೆಡ್ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು ಅಂದರು.

ಉದ್ಘಾಟನೆ ಬಳಿಕ ಮಾತಾನಾಡಿದ ಆರೋಗ್ಯ ಸಚಿವ ಕೆ ಸುಧಾಕರ್, ಫನಾದ ಸರ್ಚ್ ಮೈ ಬೆಡ್ ಪೋರ್ಟಲ್ ಉದ್ಘಾಟನೆ ಮಾಡಿರುವುದು ಸಂತೋಷ ತಂದಿದೆ. ಸರ್ಚ್ ಮೈ ಬೆಡ್ ಸ್ಟ್ರೀಮ್ ಲೇನ್ ಬೆಡ್‌ಗಳನ್ನು ಕೋವಿಡ್‌ಗಾಗಿ ಮೀಸಲಿರಿಸಲಾಗಿದೆ. ಇತ್ತೀಚೆಗೆ ಎಲ್ಲವೂ ಕೂಡಾ ಸ್ಮಾರ್ಟ್ ಆಗುತ್ತಿದ್ದು, ಟೆಕ್ನಾಲಜಿ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಕೋವಿಡ್ ಸಾಫ್ಟ್‌ವೇರ್‌ನ್ನು ವ್ಯಾಕ್ಸಿನೇಷನ್‌‌ಗಾಗಿ ಮಾಡಲಾಯ್ತು. ನಮ್ಮ ಹೆಲ್ತ್ ಸೆಕ್ಟರ್ ಅನೇಕ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳುತ್ತಿದೆ.‌ ಇದು ಅನೇಕ ಸವಾಲುಗಳನ್ನು ಎದುರಿಸಲು ಬಹಳ ಸಹಾಯಕವಾಗುತ್ತಿದೆ. ಜನರಿಗೆ ಬೆಡ್‌ಗಳ ಬಗ್ಗೆ ಮಾಹಿತಿ ತಿಳಿಯಲು ಉಪಯುಕ್ತವಾಗುತ್ತದೆ. ಈ ಪೋರ್ಟಲ್ ರೋಗಿಗಳ ಪ್ರೀಷಿಯಸ್ ಟೈಂ ಉಳಿಸಲು ಸಹಾಯಕವಾಗಲಿದೆ. ‌ಕಳೆದ ವರ್ಷ ಮೋದಿಯವರು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ನ್ನು ಘೋಷಣೆ ಮಾಡಿದ್ದರು. ಫನಾದ ಪ್ರಯತ್ನಕ್ಕೆ ನಾನು ಅಭಿನಂದನೆ‌ ಸಲ್ಲಿಸುತ್ತೇನೆ ಎಂದು ತಿಳಿಸಿದರು.‌

ಏನಿದು ಸರ್ಚ್ ಮೈ ಬೆಡ್ : ಕೆಪಿಎಂಇ ಅಡಿಯಲ್ಲಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳು, ತಮ್ಮಲ್ಲಿ ಖಾಲಿ ಇರುವ, ಭರ್ತಿಯಾಗಿರುವ ಹಾಸಿಗೆಗಳ ಮಾಹಿತಿಯನ್ನ ಇದರಲ್ಲಿ ಅಪಲೋಡ್ ಮಾಡುತ್ತಾರೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ.‌ ಎಷ್ಟು ಐಸಿಯು ಬೆಡ್, ವೆಂಟಿಲೇಟರ್ ಬೆಡ್ ಇದೆ ಎಂಬುದನ್ನ ಸುಲಭದಲ್ಲಿ ತಿಳಿಯಬಹುದು. ಈ ಮಾಹಿತಿಯು ಸದ್ಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಬೆಡ್ ಮಾಹಿತಿಯು ಸಿಗಲಿದೆ.

ಈಗಾಗಲೇ 90ಕ್ಕೂ ಹೆಚ್ಚು ಆಸ್ಪತ್ರೆಗಳು ಈ ಪೋರ್ಟಲ್ ಮೂಲಕ ಹಾಸಿಗೆ ಲಭ್ಯತೆ ಬಗ್ಗೆ ಮಾಹಿತಿ ನೀಡುತ್ತಿವೆ. ಪೋರ್ಟಲ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡಲು ಆಸ್ಪತ್ರೆಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಸದ್ಯಕ್ಕೆ ಕೋವಿಡ್ ಬೆಡ್ ಬಗ್ಗೆ ಮಾಹಿತಿ ಇರಲಿದ್ದು, ನಂತರ ದಿನದಲ್ಲಿ ನಾನ್ ಕೋವಿಡ್ ಬೆಡ್ ಲಭ್ಯತೆ ಬಗ್ಗೆಯೂ ಮಾಹಿತಿ ನೀಡಲಾಗುತ್ತೆ ಎಂದು ವಿವರಿಸಿದರು.‌

ಜನಸಾಮಾನ್ಯರು ಹೇಗೆ ಬಳಸಬೇಕು : ಜನರು ತಮ್ಮ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಮೂಲಕ www.searchmybed.com ಟೈಪ್ ಮಾಡಿದರೆ ಆ ವೆಬ್‌ಸೈಟ್ ಗೆ ಹೋಗಬಹುದು.‌ ಅಲ್ಲಿ ಸರ್ಚ್ ಆಯ್ಕೆ ಇದ್ದು ಬಟನ್ ಪ್ರೆಸ್ ಮಾಡಿದರೆ ಆಸ್ಪತ್ರೆ ಪಟ್ಟಿ, ಎಷ್ಟು ಹಾಸಿಗೆಗಳು ಲಭ್ಯವಿವೆ, ಎಷ್ಟು ಭರ್ತಿಯಾಗಿವೆ ಎಂಬ ಮಾಹಿತಿ ಸಿಗುತ್ತೆ. ನಂತರ ಆಸ್ಪತ್ರೆ ಸಿಬ್ಬಂದಿಯನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು.‌

ABOUT THE AUTHOR

...view details