ಬೆಂಗಳೂರು:ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಇಲಾಖೆಯಲ್ಲಿ ಜಾರಿಗೊಳಿಸಿರುವ ಪೊಲೀಸ್ ಐಟಿ - V2 ತಂತ್ರಾಂಶ, ITPA ಸರಳ ಆಪ್, ಪೊಲೀಸ್ ಮಿತ್ರ ಚಾಟ್ ಬಾಟ್, CG ನೋಂದಣಿ ಪೋರ್ಟಲ್, ರಾಜ್ಯ ಪೊಲೀಸ್ ಕೃತಕ ಬುದ್ದಿ ಮತ್ತೆ ತಂತ್ರಾಂಶ, ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ, ಕರ್ನಾಟಕ ಪೊಲೀಸ್ ಡೇಟಾಥಾನ್ 2024, ಹ್ಯಾಕಥಾನ್ 2024 ಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.
ಏನಿದು ಪೊಲೀಸ್ ಐಟಿ ವಿ2 ತಂತ್ರಜ್ಞಾನ? :ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಪೂರ್ಣ ಪ್ರಮಾಣದಲ್ಲಿ ತನಿಖಾ ಪ್ರಕ್ರಿಯೆಯನ್ನು ಸಮಗ್ರವಾಗಿ ಕೈಗೊಳ್ಳಲು ಎಫ್‌ಐಆರ್ ನೋಂದಣಿಯಿಂದ ಹಿಡಿದು ಪ್ರಕರಣದ ವಿಲೇವಾರಿವರೆಗಿನ ಎಲ್ಲ ಕಾರ್ಯಚಟುವಟಿಕೆಗಳನ್ನು ತಡೆ ರಹಿತವಾಗಿ ನಿರ್ವಹಿಸುವ ತಂತ್ರಜ್ಞಾನವಾಗಿದೆ. ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶಿನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
'ಐಟಿಪಿಎ (ITPA) ಸರಳ ಮೊಬೈಲ್ ಆ್ಯಪ್' :ಆಧುನಿಕ ಯುಗದ ಗುಲಾಮಗಿರಿಯ ರೂಪವಾಗಿರುವ ಮಾನವ ಕಳ್ಳಸಾಗಣಿಕೆ ಜನರ ಘನತೆ ಮತ್ತು ಭದ್ರತೆಗೆ ಮಾರಕವಾಗಿದೆ. ಮಾನವ ಕಳ್ಳಸಾಗಣಿಕೆಯ ವಿರುದ್ಧದ ಕಾನೂನುಗಳು ನಿರ್ಣಾಯಕವಾಗುತ್ತದೆ. ಆದ್ದರಿಂದ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳು, ಕಾರ್ಯವಿಧಾನಗಳು, ಅನ್ವಯವಾಗುವ ಕಾನೂನುಗಳು ಮತ್ತು ಸಂತ್ರಸ್ತರಿಗೆ ಆಶ್ರಯ ತಂಗುದಾಣಗಳ ಕುರಿತು ಸುಲಭವಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ.
ಹೀಗಿದೆ ಚಾಟ್‌ಬಾಟ್:ಸಾರ್ವಜನಿಕರಿಗೆ ಇಂದಿನ ಯುಗದಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳಾದ ಸೈಬರ್ ಅಪರಾಧ, ಸಂಚಾರ, ಮಹಿಳೆ & ಮಕ್ಕಳ ಮೇಲಿನ ಸಮಸ್ಯೆಗಳು ಮತ್ತು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಉತ್ತರ ನೀಡಲು ಅನುಕೂಲಕರವಾಗುವಂತೆ "ಪೊಲೀಸ್ ಮಿತ್ರ" ಎಂಬ ಚಾಟ್‌ಬಾಟ್ ಸೇವೆಯನ್ನು ChatGPT ತಂತ್ರಜ್ಞಾನದೊಂದಿಗೆ ಸಂಯೋಜನೆಗೊಳಿಸಿ ಅನುಷ್ಠಾನಗೊಳಿಸಲಾಗಿದೆ.
ಅನುಕಂಪ ಆಧಾರದ ನೇಮಕಾತಿ ಪೋರ್ಟಲ್:ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅನುಕಂಪದ ನೇಮಕಾತಿಯನ್ನು ಪಾರದರ್ಶಕವಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುತ್ತಿದೆ. ಇದರಿಂದ ಅರ್ಜಿದಾರರು ಕಚೇರಿಗಳಿಗೆ ಅನವಶ್ಯಕವಾಗಿ ಭೇಟಿ ನೀಡುವ ಅವಧಿ ಕಡಿಮೆಯಾಗಲಿದ್ದು, ಮೃತ ನೌಕರನ ಕುಟುಂಬಕ್ಕೆ ನೆಮ್ಮದಿ ನೀಡುವಲ್ಲಿ ನೆರವಾಗಲಿದೆ.
ಕೆಎಸ್‌ಪಿ ಎಐ:ಪೊಲೀಸ್ ಇಲಾಖೆಯು ಹೊಸದಾಗಿ ಅನುಷ್ಟಾನಗೊಳಿಸುತ್ತಿರುವ ಕೆಎಸ್‌ಪಿ ಎಐ ತಂತ್ರಾಂಶವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI), ಮಶೀನ್ ಲರ್ನಿಂಗ್ (ML) ತಂತ್ರಜ್ಞಾನದ ಮೂಲಕ ಪ್ರಕರಣದ ಸಂಕ್ಷಿಪ್ತ ಸಂಗತಿಗಳನ್ನ ಉಪ ಸಂಗತಿಗಳಾಗಿ ವಿಭಜಿಸುವ, ಪ್ರಕ್ರಿಯೆಯನ್ನು ಸ್ವಯಂಚಾಲಿತ ಗೊಳಿಸಿಕೊಳ್ಳುವ ಮೂಲಕ ಪ್ರಕರಣದ ವಿಶ್ಲೇಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ. ಲಭ್ಯವಿರುವ ದತ್ತಾಂಶದ ಮೇಲೆ ತರಬೇತಿ ಪಡೆದ ಅತ್ಯಾಧುನಿಕ ಎಐ ಮಾದರಿ ಬಳಸಿಕೊಂಡು, ಮಾನವ ಹಸ್ತಕ್ಷೇಪವಿಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಅನ್ವಯವಾಗುವ ಕಾಯ್ದೆಗಳು ಮತ್ತು ವಿಭಾಗಗಳನ್ನು ಪರಿಣಾಮಕಾರಿಯಾಗಿ ಗುರುತಿಸಲಿದೆ..
ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ:ಆನ್‌ಲೈನ್ ಹಣಕಾಸು ವಹಿವಾಟುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆರ್ಥಿಕ ಅಪರಾಧಗಳು ಸಹ ಹೆಚ್ಚಾಗುತ್ತಿದ್ದು ಅಪಾರ ಪ್ರಮಾಣದ ದತ್ತಾಂಶವನ್ನು ವಿಶ್ಲೇಷಿಸಲು ಮತ್ತು ಅಪರಾಧಕ್ಕೆ ಸಂಬಂಧಪಟ್ಟ ಕುರುಹುಗಳನ್ನು ಗುರುತಿಸಲು, ಸ್ವಯಂಚಾಲಿತ ಮಾದರಿ ಗುರುತಿಸುವಿಕೆ, ಹಣಕಾಸು ವಹಿವಾಟಿನ ಪರಸ್ಪರ ಸಂಬಂಧಗಳ ವಿಶ್ಲೇಷಣೆಯಲ್ಲಿ ಈ ತಂತ್ರಾಂಶವು ಸಹಕಾರಿಯಾಗಲಿದೆ.
ಇದನ್ನೂ ಓದಿ:ಬೆಂಗಳೂರು: ತಿರುವಳ್ಳುವರ್ ಪ್ರತಿಮೆಗೆ ಬಿ.ವೈ.ವಿಜಯೇಂದ್ರ ಮಾಲಾರ್ಪಣೆ