ಆನೇಕಲ್: ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಯಿಂದ ಮನೆ ಬಾಗಿಲಿಗೆ ಹೃದಯ ತಪಾಸಣೆ ನಡೆಸುವ ಮೊಬೈಲ್ (ಆಂಬ್ಯುಲೆನ್ಸ್) ವಾಹನವನ್ನು ಡಾ. ವಿವೇಕ್ ಜವಳಿ ಲೋಕಾರ್ಪಣೆಗೊಳಿಸಿದ್ದಾರೆ.
ಒತ್ತಡಗಳ ಹಾಗು ಸಂಚಾರ ದಟ್ಟಣೆಯ ಗೋಜಿಲ್ಲದೆ ಒಂದು ಕರೆಯಲ್ಲಿ ಮನೆ ಬಾಗಿಲಿಗೆ ಇಂತಹ ಸೇವೆಯನ್ನು 'ವಿಶ್ವ ಹೃದಯ ದಿನ' ದಂದೇ ಚಾಲನೆಗೊಂಡಿದೆ. ಇದರಿಂದ ಆಸ್ಪತ್ರೆಗೆ ತೆರಳಿ ಹೃದಯ ಪರೀಕ್ಷೆ ಮಾಡಿಸಲು ಹೆದರುವ ಮಂದಿ ಸಾವಕಾಶವಾಗಿ ಈ ಸೇವೆಯನ್ನು ಪಡೆಯಬಹುದಾಗಿದೆ.
ಪೋರ್ಟಿಸ್ ಆಸ್ಪತ್ರೆಯ 15 ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿ, ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್‌ನನ್ನು ಪೋರ್ಟೀಸ್ ಆಸ್ಪತ್ರೆಯ ಕಾರ್ಡಿಯಾಕ್ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ. ಬಹುತೇಕರಿಗೆ ಹೃದಯಾಘಾತದ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲವಾದ್ದರಿಂದ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಶೇ.25 ರಷ್ಟು ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ.