ಬೆಂಗಳೂರು:ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರಿತಂತೆ ಲೇಖಕ ಸುಧಾಕರ್ ಎಂಬುವರು ಬರೆದಿದ್ದ 'ಇಮ್ರಾನ್ ಖಾನ್ ಒಂದು ಜೀವಂತ ದಂತಕಥೆ' ಪುಸ್ತಕ ಬಿಡುಗಡೆ ಕಾರ್ಯಕ್ರಮ ದಿಢೀರ್ ರದ್ದಾಗಿದೆ.
ಮಲ್ಲತ್ತ ಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆಗೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂಜಾಗ್ರತೆ ಕ್ರಮವಾಗಿ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.
ಈ ಸಂಬಂಧ ದೂರು ನೀಡಿ ಮಾತನಾಡಿದ ಸಮಿತಿ ಸಂಚಾಲಕ ಮೋಹನ್ ಗೌಡ, ಕೆಲ ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ 40 ಮಂದಿ ಭಾರತೀಯ ಸೈನಿಕರು ಸಾವಿಗೀಡಾಗಿದ್ದರು. ಇದಕ್ಕೆ ಪರೋಕ್ಷ ಕಾರಣ ಇಮ್ರಾನ್ ಖಾನ್. ಹೀಗಾಗಿ ಅವರ ಹೆಸರಿನಲ್ಲಿ ಪುಸ್ತಕ ಬಿಡುಗಡೆಯಾಗುತ್ತಿರುವುದು ಸರಿಯಲ್ಲ. ಹೀಗಾಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಕೂಡದು ಎಂದು ಆಗ್ರಹಿಸಿದರು.
ದೂರು ಪರಿಶೀಲನೆ ನಡೆಸಿದ ಪೊಲೀಸರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಲೇಖಕ ಎಸ್.ಬಿ ಸುಧಾಕರ್ ಅವರು ಬರೆದಿರುವ ಪುಸ್ತಕ ಲೋಕಾರ್ಪಣೆಗೆ ನ್ಯಾ.ಹೆಚ್.ಎಸ್ ನಾಗಮೋಹನ್ ದಾಸ್ ಅವರನ್ನು ಆಹ್ವಾನಿಸಲಾಗಿತ್ತು. ಮಾಜಿ ಸಚಿವರಾದ ಹೆಚ್.ಆರ್ ಲೀಲಾದೇವಿ ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಬೇಕಿತ್ತು.
ಇದನ್ನೂ ಓದಿ:ಪ್ರಸ್ತುತ ನಮ್ಮಲ್ಲಿ ಮೂರು ಗೂಂಡಾಗಳ ಸರ್ಕಾರವಿದೆ.. ಮತ್ತೆ ಭಾರತವನ್ನು ಹೊಗಳಿದ ಇಮ್ರಾನ್ ಖಾನ್!